ಮಹಾ ಕುಂಭಮೇಳದಲ್ಲಿನ ಸಾವುಗಳ ಸಂಖ್ಯೆಯನ್ನು ಉತ್ತರ ಪ್ರದೇಶ ಸರಕಾರ ಬಚ್ಚಿಟ್ಟಿದೆ: ರಾಹುಲ್ ಗಾಂಧಿ ಆರೋಪ
ರಾಹುಲ್ ಗಾಂಧಿ | PTI
ಹೊಸದಿಲ್ಲಿ: ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಉತ್ತರ ಪ್ರದೇಶ ಸರಕಾರ ಬಚ್ಚಿಟ್ಟಿದೆ ಎಂದು ಬಿಬಿಸಿ ಸುದ್ದಿ ಸಂಸ್ಥೆಯ ವರದಿಯೊಂದನ್ನು ಉಲ್ಲೇಖಿಸಿ ಬುಧವಾರ ಆರೋಪಿಸಿರುವ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಈ ಘಟನೆಯ ಕುರಿತು ಬಿಜೆಪಿ ಯಾವುದೇ ಉತ್ತರದಾಯಿತ್ವ ಪ್ರದರ್ಶಿಸಿಲ್ಲ ಎಂದೂ ವಾಗ್ದಾಳಿ ನಡೆಸಿದ್ದಾರೆ.
ʼಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಬಚ್ಚಿಡಲಾಗಿದೆ ಎಂಬ ಸಂಗತಿಯನ್ನು ಬಿಬಿಸಿ ವರದಿ ಬಯಲು ಮಾಡಿದೆ. ಕೋವಿಡ್‌ನಂತೆಯೇ, ಪ್ರತಿ ಬಾರಿ ಪ್ರಮುಖ ರೈಲು ಅಪಘಾತ ಸಂಭವಿಸಿದಾಗಲೂ ಬಡವರ ಸಾವಿನ ಬಗ್ಗೆ ಅಂಕಿ-ಅಂಶಗಳನ್ನು ಬಚ್ಚಿಡಲಾಗುತ್ತಿದೆʼ ಎಂದು ಅವರು ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಆಪಾದಿಸಿದ್ದಾರೆ.
“ಇದು ಬಿಜೆಪಿಯ ಮಾದರಿಯಾಗಿದೆ. ಎಲ್ಲಿ ಬಡವರ ಲೆಕ್ಕ ಇರುವುದಿಲ್ಲವೊ, ಅಲ್ಲಿ ಉತ್ತರದಾಯಿತ್ವವೂ ಇರುವುದಿಲ್ಲ!” ಎಂದೂ ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಮಂಗಳವಾರ ಇದೇ ವರದಿಯನ್ನು ಉಲ್ಲೇಖಿಸಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ಜನವರಿ 29ರಂದು ಮಹಾ ಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟವರ ಅಂಕಿ-ಅಂಶಗಳ ಕುರಿತು ಉತ್ತರ ಪ್ರದೇಶ ಸರಕಾರ ಸುಳ್ಳು ಹೇಳುತ್ತಿದೆ ಹಾಗೂ ಸುಳ್ಳು ಅಂಕಿ-ಅಂಶಗಳನ್ನು ನೀಡುವವರು ಸಾರ್ವಜನಿಕರ ವಿಶ್ವಾಸಕ್ಕೆ ಅರ್ಹರಲ್ಲ” ಎಂದು ಹೇಳಿದ್ದಾರೆ.