×
Ad

ಭಟ್ಕಳ: ಬೈಕ್ ಗೆ ಟ್ಯಾಂಕರ್‌ ಢಿಕ್ಕಿ; ಸವಾರ ಮೃತ್ಯು

Update: 2025-08-23 12:39 IST

ಭಟ್ಕಳ:  ಚಲಿಸುತ್ತಿದ್ದ ಬೈಕ್‌ಗೆ ಟ್ಯಾಂಕರ್‌ವೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿಯಲ್ಲಿದ್ದ ಅವರ ಪತ್ನಿ ಗಾಯಗೊಂಡ ಘಟನೆ ನೂರ್ ಮಸೀದಿಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಬೆಳಿಗ್ಗೆ  ನಡೆದಿದೆ.

ಮುರ್ಡೇಶ್ವರ ಬಸ್ತಿಯ ನಿವಾಸಿ ಈಶ್ವರ ನಾಯ್ಕ(61) ಮೃತ ವ್ಯಕ್ತಿ. ಅವರ ಪತ್ನಿ ಭಾರತಿ ನಾಯ್ಕ (47) ಗಾಯಗೊಂಡು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಶ್ವರ ನಾಯ್ಕ ತಮ್ಮ ಪತ್ನಿಯೊಂದಿಗೆ ಭಟ್ಕಳದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು. ಈ ವೇಳೆ

ವೇಗವಾಗಿ ಚಲಿಸುತ್ತಿದ್ದ ಟ್ಯಾಂಕರ್‌ ಈಶ್ವರ ನಾಯ್ಕ ಚಲಾಯಿಸುತ್ತಿದ್ದ ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಈಶ್ವರ್‌ ಅವರ ತಲೆಯ ಮೇಲೆ ಟ್ಯಾಂಕರ್‌ನ ಚಕ್ರ ಹಾದುಹೋಗಿದೆ. ಹೆಲ್ಮೆಟ್ ಧರಿಸಿದ್ದರೂ ಅಪಘಾತದ ತೀವ್ರತೆ ಹೆಚ್ಚಿತ್ತು ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಹೆದ್ದಾರಿಯ ನಾಲ್ಕು ಪಥದ ಕಾಮಗಾರಿ ನಗರದ ಮಧ್ಯಭಾಗದಲ್ಲಿ ಅಪೂರ್ಣವಾಗಿರುವ ಕಾರಣ, ಭಟ್ಕಳ ಕ್ವಾಲಿಟಿ ಹೊಟೆಲ್‌ನಿಂದ ನೂರ್ ಮಸೀದಿ, ಶಂಸುದ್ದೀನ್ ಸರ್ಕಲ್ ಹಾಗೂ ನವಾಯತ್ ಕಾಲೊನಿವರೆಗಿನ ರಸ್ತೆಯಲ್ಲಿ ವಾಹನ ಒತ್ತಡ ಗಣನೀಯವಾಗಿ ಹೆಚ್ಚಾಗಿದೆ. ಭಾರಿ ವಾಹನಗಳ ತೀವ್ರ ವೇಗದ ಚಾಲನೆಯಿಂದ ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಿದೆ. ಪಾದಚಾರಿಗಳಿಗೆ ರಸ್ತೆ ದಾಟುವುದು ಮತ್ತು ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸುವುದು ಅಪಾಯಕಾರಿಯಾಗಿದೆ. ನಾಲ್ಕು ಪಥದ ಕಾಮಗಾರಿ ಪೂರ್ಣಗೊಳ್ಳದಿರುವುದು ಮತ್ತು ಸ್ಥಳೀಯ ವಾಹನಗಳಿಗೆ ಪ್ರತ್ಯೇಕ ಸರ್ವೀಸ್ ರಸ್ತೆ ಇಲ್ಲದಿರುವುದು ಈ ಅಪಘಾತಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜೀವಹಾನಿಯನ್ನು ತಡೆಯಲು ತಕ್ಷಣದ ಕ್ರಮಕೈಗೊಂಡು, ರಾಷ್ಟ್ರೀಯ ಹೆದ್ದಾರಿಯನ್ನು ಅಪಘಾತ-ಮುಕ್ತವಾಗಿಸಲು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News