×
Ad

ಕಾರವಾರ | ಬಿಸಿಯೂಟ ಸೇವಿಸಿ 22ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Update: 2025-11-29 17:35 IST

ಕಾರವಾರ : ಮುಂಡಗೋಡ ತಾಲೂಕಿನ ಸರಕಾರಿ ಮಾದರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ವರದಿಯಾಗಿದೆ.

ಅಕ್ಷರ ದಾಸೋಹ ಯೋಜನೆಯಡಿ ಪೂರೈಕೆಯಾದ ಆಹಾರ ಧಾನ್ಯಗಳಲ್ಲಿ ಕಸ, ಕಡ್ಡಿ ಹಾಗೂ ಇಲಿ ಹಿಕ್ಕೆಗಳು ಪತ್ತೆಯಾಗಿದ್ದು, ಕಳಪೆ ಗುಣಮಟ್ಟದ ಆಹಾರವೇ ಮಕ್ಕಳ ಅನಾರೋಗ್ಯಕ್ಕೆ ಕಾರಣ ಎನ್ನಲಾಗಿದೆ.

ಶಾಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳಿದ್ದು, ಮಧ್ಯಾಹ್ನ ಊಟ ಸೇವಿಸಿದ ತಕ್ಷಣ ಹಲವು ಮಕ್ಕಳು ತೀವ್ರ ಹೊಟ್ಟೆನೋವು ಮತ್ತು ವಾಂತಿಯಿಂದ ನರಳಲಾರಂಭಿಸಿದ್ದಾರೆ. ತಕ್ಷಣವೇ ಅಸ್ವಸ್ಥಗೊಂಡ 22 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 12 ಮಕ್ಕಳನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಉಳಿದ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಬಡಿಸಿದ ಆಹಾರದಲ್ಲಿ ಇಲಿ ಹಿಕ್ಕೆಗಳು ಕಂಡುಬಂದಿದ್ದು, ಶಾಲಾ ಶಿಕ್ಷಕರು ಈ ಬಗ್ಗೆ ಸಮರ್ಪಕ ಉತ್ತರ ನೀಡದೆ ನುಣಚಿಕೊಳ್ಳುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಕೇವಲ ಮುಂಡಗೋಡ ಮಾತ್ರವಲ್ಲದೆ, ನೆರೆಯ ಹಳಿಯಾಳ ಪಟ್ಟಣದ ದೇಶಪಾಂಡೆ ಆಶ್ರಯ ನಗರ, ಗುಡ್ನಾಪುರ ಕಾಲೋನಿ ಸೇರಿದಂತೆ ಹಲವು ಸರಕಾರಿ ಮತ್ತು ಉರ್ದು ಶಾಲೆಗಳಲ್ಲಿಯೂ ಇದೇ ರೀತಿಯ ಅವ್ಯವಸ್ಥೆ ಇದೆ ಎಂದು ಪೋಷಕರು ದೂರಿದ್ದಾರೆ.

ಬಿಸಿಯೂಟದ ಕೊಠಡಿಗಳು ಗುಜರಿ ವಸ್ತುಗಳ ದಾಸ್ತಾನು ಕೊಠಡಿಗಳಂತಾಗಿದ್ದು, ನೈರ್ಮಲ್ಯದ ಕೊರತೆಯಿಂದ ಕೂಡಿವೆ. ಕಳಪೆ ಆಹಾರ ಧಾನ್ಯವನ್ನು ತಿರಸ್ಕರಿಸುವ ಅಧಿಕಾರ ಮುಖ್ಯ ಶಿಕ್ಷಕರಿಗಿದ್ದರೂ, ಅವರು ಮೌನ ವಹಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಬಿ.ಇ.ಓ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News