ಭಟ್ಕಳ| ಕಿರುಕುಳ ಪ್ರಕರಣ: ಮೂವರು ಆರೋಪಿಗಳ ಬಂಧನ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೈಬರ್ ಕಿರುಕುಳ ಮತ್ತು ಬೆದರಿಕೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೂರುದಾರರಾದ ತರಕಾರಿ ವ್ಯಾಪಾರಿ ಅನ್ವರಭಾಷಾ (57) ಅವರ ಮಗಳ ಸಾನಿಯಾ ಅವರ ಖಾಸಗಿ ಫೋಟೋ ಮತ್ತು ವಿಡಿಯೋ ಇದೆ ಎಂದು ಬೆದರಿಸಿ, ಆರೋಪಿಗಳು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಭಟ್ಕಳ ಶಹರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅ. 20 ರಂದು ಬೆಳಿಗ್ಗೆ 11 ಗಂಟೆಗೆ ಭಟ್ಟಗಾಂವ್, ಕಿದ್ವಾಯಿ ರಸ್ತೆಯ ನಿವಾಸಿ ಅನ್ವರಭಾಷಾ ಭಟ್ಕಳ ಶಹರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದರು. ದೂರಿನಲ್ಲಿ, ಅ.16 ರಂದು ರಾತ್ರಿ 9:35ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ದೂರುದಾರ ಮೊಬೈಲ್‌ಗೆ ಕರೆ ಮಾಡಿ, ಸಾನಿಯಾ ಅವರ ಖಾಸಗಿ ಫೋಟೋ ಮತ್ತು ವಿಡಿಯೋ ತಮ್ಮ ಬಳಿ ಇದೆ ಎಂದು ಹೇಳಿ, 20 ಲಕ್ಷ ರೂ. ಕೊಡದಿದ್ದರೆ ಅವುಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಇದೇ ರೀತಿ, ಆ.18 ರಂದು ದೂರುದಾರರ ಪತ್ನಿ ಸಾಹಿರಾ ಬಾನು ಅವರ ಮೊಬೈಲ್‌ಗೆ ಸಂಖ್ಯೆಯಿಂದ ಮತ್ತು ಆ.19 ರಂದು ಮಧ್ಯಾಹ್ನ ಕರೆ ಮಾಡಿ, 15 ಲಕ್ಷ ರೂ. ಕೊಡುವಂತೆ ಒತ್ತಾಯಿಸಿ ಬೆದರಿಕೆ ಹಾಕಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಅರಿತ ಭಟ್ಕಳ ಶಹರ ಪೊಲೀಸರು, ಪೊಲೀಸ್ ಉಪಾಧೀಕ್ಷಕ ಮಹೇಶ ಎಂ.ಕೆ. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಮ್. ಮತ್ತು ಪಿಎಸ್‌ಐ ನವೀನ ಎಸ್. ನಾಯಕ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಿದರು. ತಾಂತ್ರಿಕ ಸಾಕ್ಷ್ಯಗಳು ಮತ್ತು ಗುಪ್ತ ಮಾಹಿತಿಯ ಆಧಾರದಲ್ಲಿ, ಆರೋಪಿಗಳಾದ ಮುಹಮ್ಮದ್ ಫಾರಿಸ್ (20) ಕೋಡಿ, ಭಟ್ಕಳ, ಮುಹಮ್ಮದ್ ಅರ್ಶದ್ ಬ್ಯಾರಿ (22), ಮೂಸಾನಗರ, ಭಟ್ಕಳ ಮತ್ತು ಅಮನ್ ಖಾನ್ (20) ಹಾಲಾಡಿ, ಉಡುಪಿ ಎಂಬವರನ್ನು ಬಂಧಿಸಲಾಯಿತು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯಾದ ದಿನೇಶ ನಾಯಕ, ವಿನಾಯಕ ಪಾಟೀಲ್, ನಾಗರಾಜ ಮೊಗೇರ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗುಣಸಿ, ಲೊಕೇಶ ಕತ್ತಿ, ಮಹೇಶ ಅಮಗೋತ, ರಾಘವೇಂದ್ರ ಗೌಡ, ಜಗದೀಶ ನಾಯ್ಕ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಬಬನ್ ಮತ್ತು ಉದಯ ಗುನಗಾ ಅವರು ಪಾಲ್ಗೊಂಡಿದ್ದರು.
ಈ ಘಟನೆಯಿಂದ ಸೈಬರ್ ಕಿರುಕುಳದ ವಿರುದ್ಧ ಕಠಿಣ ಕ್ರಮಕ್ಕೆ ಭಟ್ಕಳ ಪೊಲೀಸರ ಕಾರ್ಯತಂತ್ರ ಸಮಾಜದಲ್ಲಿ ಭರವಸೆ ಮೂಡಿಸಿದೆ. ಸಾರ್ವಜನಿಕರು ಇಂತಹ ಯಾವುದೇ ಸೈಬರ್ ಅಪರಾಧದ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಭಟ್ಕಳ ಶಹರ ಪೊಲೀಸರು ಮನವಿ ಮಾಡಿದ್ದಾರೆ.