ಭಟ್ಕಳ: ಸೆ.13ರಂದು ಬೃಹತ್ ಲೋಕ ಅದಾಲತ್
ಭಟ್ಕಳ: ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯಂತೆ, ಭಟ್ಕಳ ತಾಲೂಕು ನ್ಯಾಯಾಲಯ ಸಂಕೀರ್ಣದಲ್ಲಿ ಸೆಪ್ಟೆಂಬರ್ 13ರಂದು ಬೃಹತ್ ಲೋಕ ಅದಾಲತ್ ಆಯೋಜಿಸಲಾಗಿದೆ.
ಕಕ್ಷಿದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಕೋರಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕ ಅದಾಲತ್‌ನಲ್ಲಿ ರಾಜಿಯಾ ಗತಕ್ಕ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ವೇದಿಕೆಯಿದೆ. ಕಕ್ಷಿದಾರರು ಮತ್ತು ವಕೀಲರು ತಾಲೂಕು ಕಾನೂನು ಸೇವಾ ಸಮಿತಿಯ ಮೂಲಕ ತಮ್ಮ ಪ್ರಕರಣಗಳನ್ನು ಲೋಕ ಅದಾಲತ್‌ಗೆ ತರಬೇಕೆಂದು ಮನವಿ ಮಾಡಿದರು.
ವಕೀಲರ ಸಂಘದ ಸಹಕಾರದೊಂದಿಗೆ ಈಗಾಗಲೇ 1508 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇನ್ನೂ ಹೆಚ್ಚಿನ ಪ್ರಕರಣಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಕಕ್ಷಿದಾರರು ತಮ್ಮ ವಕೀಲರ ಮೂಲಕ ಅಥವಾ ನೇರವಾಗಿ ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಿ, ರಾಜಿಯಾಗತಕ್ಕ ಪ್ರಕರಣಗಳನ್ನು ಲೋಕ ಅದಾಲತ್‌ಗೆ ತರಬಹುದು. ಈ ಪ್ರಕರಣಗಳನ್ನು ಎರಡೂ ಪಕ್ಷಗಾರರ ಒಪ್ಪಿಗೆಯ ಮೇಲೆ ಇತ್ಯರ್ಥಗೊಳಿಸಲಾ ಗುವುದು, ಇದರಿಂದ ಕಕ್ಷಿದಾರರಿಗೆ ಯಾವುದೇ ಆರ್ಥಿಕ ಹೊರೆಯಾಗದು. ರಾಜಿಯ ಮೂಲಕ ಇತ್ಯರ್ಥವಾದ ಪ್ರಕರಣಗಳಿಗೆ ಅಪೀಲು ಸಾಧ್ಯವಿರುವುದಿಲ್ಲ, ಹಾಗೂ ನ್ಯಾಯಾಲಯಕ್ಕೆ ಕಟ್ಟಿದ ಕೋರ್ಟ್ ಶುಲ್ಕವನ್ನು ಮರಳಿ ಪಡೆಯಬಹುದಾಗಿದೆ. ಇದರಿಂದ ಪಕ್ಷಗಾರರ ನಡುವಿನ ಸೌಹಾರ್ದತೆ ಉಳಿಯುವುದಲ್ಲದೆ, ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗಲಿದೆ ಎಂದು ಕಾಂತ ಕುರಣಿ ವಿವರಿಸಿದರು.ಲೋಕ ಅದಾಲತ್‌ನಲ್ಲಿ ಐಪಿಸಿ, ರಾಜಿಯಾಗತಕ್ಕ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಾತಿ, ಮೋಟಾರು ವಾಹನ ಕಾಯಿದೆ ಉಲ್ಲಂಘನೆ, ವಾರಂಟ್, ಜಮೀನು ಸ್ವಾಧೀನ, ಎಕ್ಸಿಕ್ಯೂಶನ್, ಮತ್ತು ಮೋಟಾರು ವಾಹನ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ರಾಜಿಯ ಮೂಲಕ ಇತ್ಯರ್ಥಗೊಳಿಸಬಹುದು. ಕಕ್ಷಿದಾರರು ಈ ಸಂಬಂಧ ನ್ಯಾಯಾಲಯದ ಆವರಣದಲ್ಲಿರುವ ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಧೀಶೆ ಧನವತಿ ಉಪಸ್ಥಿತರಿದ್ದರು.