×
Ad

ಭಟ್ಕಳ: ಇಪಿಎಸ್-4 ಕ್ರಿಕೆಟ್ ಟೂರ್ನಮೆಂಟ್ ಸಮಾರೋಪ

Update: 2025-02-11 19:57 IST

ಭಟ್ಕಳ: ಭಟ್ಕಳದ ಪೊಲೀಸ್ ಮೈದಾನದಲ್ಲಿ ನಡೆದ ಎಂಪ್ಲಾಯೀಸ್ ಪ್ರೀಮಿಯರ್ ಲೀಗ್ (ಇಪಿಎಸ್) ಸೀಸನ್-4 ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ ಅವರು ಕ್ರೀಡಾ ಪ್ರೇಮಿಗಳ ಹಾಗೂ ಸಮಿತಿಯ ಶ್ರಮಕ್ಕೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಒಂದು ದೊಡ್ಡ ಕ್ರೀಡಾಕೂಟವನ್ನು ಆಯೋಜಿಸಲು ಸಮಿತಿಯ ಎಲ್ಲ ಸದಸ್ಯರು ತಮ್ಮ ಶ್ರಮ, ತ್ಯಾಗ ಮತ್ತು ಕುಟುಂಬಕ್ಕೆ ಮೀಸಲಿಟ್ಟ ಸಮಯವನ್ನು ಕ್ರಿಕೆಟ್ ಪರವಾಗಿ ಅರ್ಪಿಸಿದ್ದಾರೆ. ಇಂತಹ ಸಮಾನ ಮನಸ್ಕರು ಸೇರಿ ಇಪಿಎಸ್ ಕಮಿಟಿಯನ್ನು ನಡೆಸಿ, ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿರುವುದು ಪ್ರಶಂಸನೀಯ ಎಂದರು.

ಈ ಬಾರಿಯ ಟೂರ್ನಮೆಂಟ್‌ನಲ್ಲಿ ಶ್ರೀಧರ ತಾಂಡೇಲ್ ಮಾಲಕತ್ವದ ಹಾಗೂ ರವಿ ನಾಯಕತ್ವದ ‘ರವಿ ರಾಯಲ್ಸ್’ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡರೆ, ಶಿವು ನಾಯಕತ್ವದ ‘ಕುರುಕ್ಷೇತ್ರ’ ತಂಡ ರನ್ನರ್-ಅಪ್ ಆಗಿ ಹೊರ ಹೊಮ್ಮಿತು. ಮಣಿಕಂಠ ವಾರಿಯರ್ಸ್ ತಂಡ ಮೂರನೇ ಸ್ಥಾನ ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಪೊಲೀಸ್ ಉಪಾಧೀಕ್ಷಕ ಮಹೇಶ ಎಂ., ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಪೊಲೀಸ್ ನಿರೀಕ್ಷಕ ರಾದ ಗೋಪಿಕೃಷ್ಣ ಕೆ.ಆರ್., ಚಂದನ ಗೋಪಾಲ ಸೇರಿದಂತೆ ಹಲವರು ಭಾಗವಹಿಸಿದ್ದರು. ವೀಕ್ಷಕರನ್ನು ಕ್ರಿಕೆಟ್ ಲೋಕಕ್ಕೆ ಪರಿಚಯಿಸುವಲ್ಲಿ ಇಪಿಎಸ್ ಲೀಗ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅತಿಥಿಗಳು ಅಭಿಪ್ರಾಯಪಟ್ಟರು.

ಸಮಿತಿಯ ಶೇಖರ್ ಪೂಜಾರಿಯವರ ಶ್ರಮ ಮತ್ತು ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿದೆ ಎಂದು ವೆಂಕಟೇಶ ನಾಯ್ಕ ಅವರು ಪ್ರಶಂಸಿಸಿದರು. ಈ ಕ್ರೀಡಾ ಕೂಟವು ಭಟ್ಕಳದ ಕ್ರೀಡಾ ಪ್ರೇಮಿಗಳಿಗೆ ಹೊಸ ಉತ್ಸಾಹ ತುಂಬುವಲ್ಲಿ ಯಶಸ್ವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News