ಭಟ್ಕಳದಲ್ಲಿ ‘ಕವಿ ನುಡಿ ಸಂಭ್ರಮ-4’ ಹಾಗೂ ಕರಾವಳಿ ರತ್ನ ಪ್ರಶಸ್ತಿ ಸಮಾರಂಭ
ಭಟ್ಕಳ: ಅಕ್ಷರ ನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಆಯೋಜಿಸಿದ ‘ಕವಿ ನುಡಿ ಸಂಭ್ರಮ-4’, ಎಚ್.ಎಸ್.ವಿ. ಕವಿ ನಮನ, ಡಾ. ನೀವಿಯಾ ಗೋಮ್ಸ್ ಅವರ ಜಿಲ್ಲಾಧ್ಯಕ್ಷೆ ಪದಗ್ರಹಣ ಹಾಗೂ ಕನ್ನಡ ಸಾಧಕರಿಗೆ ಕರಾವಳಿ ರತ್ನ ಪ್ರಶಸ್ತಿ ವಿತರಣಾ ಸಮಾರಂಭ ಬೇಂಗ್ರೆಯ ಮಂಜುನಾಥ ಸಭಾಗೃಹದಲ್ಲಿ ಶನಿವಾರ ನಡೆಯಿತು. ಭಟ್ಕಳ-ಹೊನ್ನಾವರ ಭಾಗದ ಡೀನ್ ಫಾದರ್ ಲಾರೆನ್ಸ್ ಡಿಸಿಲ್ವ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು. ಸಂಸ್ಥೆಯ ಅಧ್ಯಕ್ಷೆ ಶೃತಿ ಮಧುಸೂದನ್ ಅವರ ಕನ್ನಡ ಕಾಳಜಿಯನ್ನು ಶ್ಲಾಘಿಸಿ ಕ್ರಿಶ್ಚಿಯನ್ ಮಿಷನರಿಗಳ ಕನ್ನಡ ಕೊಡುಗೆಯನ್ನು ಸ್ಮರಿಸಿದ ಅವರು, ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೃತಿ ಮಧುಸೂದನ್, ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷೆಯಾಗಿ ಆಯ್ಕೆ ಯಾದ ಡಾ. ನೀವಿಯಾ ಗೋಮ್ಸ್ ಅವರಿಗೆ ಪದಗ್ರಹಣ ಮಾಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿ ಸಿದ ನಿವೃತ್ತ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜ, ಈ ನೆಲದ ಸಾಹಿತಿಗಳಾದ ಅನಂತನಾಗ್, ಶಂಕರ್‌ನಾಗ್ ಸೇರಿದಂತೆ ಗಣ್ಯರ ಕೊಡುಗೆಯನ್ನು ಸ್ಮರಿಸಿದರು.
ಸಾಹಿತಿ ಶಂಭು ಹೆಗಡೆ, ಕನ್ನಡದಲ್ಲಿ ಇಂಗ್ಲಿಷ್ ಬಳಕೆ ತಪ್ಪಿಸಬೇಕೆಂದು ಸಲಹೆ ನೀಡಿದರು. ಸೈಂಟ್ ಮಿಲಾಗ್ರಿಸ್ ಸಹಕಾರಿಯ ಅಧ್ಯಕ್ಷ ಜಾರ್ಜ್ ಫೆರ್ನಾಂಡೀಸ್, ಕೊಂಕಣಿ ಮಾತೃಭಾಷೆಯಾಗಿದ್ದರೂ ಕನ್ನಡ ದಲ್ಲಿ ಸಾಹಿತ್ಯ ರಚನೆ ಮಾಡುವುದು ಸಂತಸದಾಯಕ ಎಂದರು. ಉತ್ತರ ಕನ್ನಡವು ಸಾಹಿತಿಗಳ ತವರು ಎಂದು ಶ್ಲಾಘಿಸಿದ ಅವರು, ಸಂಸ್ಥೆಯ ಕಾರ್ಯಕ್ಕೆ ಶುಭ ಹಾರೈಸಿದರು.
ಪತ್ರಕರ್ತ ರಾಧಾಕೃಷ್ಣ ಭಟ್ಟ, ಸಾಹಿತಿ ಸವಿತಾ ನಾಯ್ಕ, ಸಮಾಜ ಸೇವಕ ಗಣೇಶ ಶಿಲ್ಪಿ ಉಪಸ್ಥಿತರಿ ದ್ದರು. ಹತ್ತಕ್ಕೂ ಹೆಚ್ಚು ಕವಿಗಳು ಕವಿತೆ ವಾಚಿಸಿದರು. ಹಲವಾರು ಸಾಧಕರಿಗೆ ಕರಾವಳಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ತಾರಾ ಸಂತೋಷ್ ಮೆರವಾಡೆ ಸ್ವಾಗತಿಸಿದರು. ಕವಿಗೋಷ್ಠಿಯನ್ನು ಫೆಲಿಕ್ಸ್ ಫೆರ್ನಾಂಡೀಸ್ ನಿರ್ವಹಿಸಿದರು.