ಭಟ್ಕಳ: ಮಜ್ಲಿಸೆ ಇಸ್ಲಾಹ್-ವ-ತಂಝೀಮ್‌ನಲ್ಲಿ 50 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಮುಹಮ್ಮದ್ ಜಾಫರ್
ಭಟ್ಕಳ: ಮಜ್ಲಿಸೆ ಇಸ್ಲಾಹ್-ವ-ತಂಝೀಮ್‌ನಲ್ಲಿ ಕಳೆದ 50 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಮುಹಮ್ಮದ್ ಜಾಫರ್ (ತಂಝೀಮ್ ಜಾಫರ್) ಅವರಿಗೆ ಹೃದಯಪೂರ್ವಕವಾಗಿ ಬೀಳ್ಕೊಡುಗೆ ನೀಡಲಾಯಿತು.
ಶಿರೂರಿನ ಎಮ್.ಎಮ್. ರೆಸಾರ್ಟ್‌ನಲ್ಲಿ ತಂಝೀಮ್ ವತಿಯಿಂದ ಆಯೋಜಿಸಿದ್ದ "ಶಾಮ್ ಎಕ್ಜಹತಿ" ಗೆಟ್ ಟುಗೆದರ್ ಮತ್ತು ಈದ್ ಮಿಲನ್ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿ, 5 ಲಕ್ಷ ರೂಪಾಯಿಗಳ ಚೆಕ್ ಮತ್ತು ಗೌರವಾನ್ವಿತ ಪುರಸ್ಕಾರ ನೀಡಲಾಯಿತು.
ಭಟ್ಕಳದಲ್ಲಿ "ತಂಝೀಮ್ ಜಾಫರ್" ಎಂದೇ ಖ್ಯಾತರಾಗಿರುವ ಮುಹಮ್ಮದ್ ಜಾಫರ್ ಅವರು ತಮ್ಮ ಜೀವನದ ಮುಕ್ಕಾಲು ಭಾಗವನ್ನು ತಂಝೀಮ್‌ನ ಸೇವೆಗೆ ಮಾಡಿದ್ದಾರೆ. ಅವರು ಸನ್ಮಾನ ಸ್ವೀಕರಿಸು ವಾಗ ಭಾವುಕರಾಗಿ, "ನಾನು ಗಲ್ಫ್‌ನಿಂದ ಕೆಲಸ ಬಿಟ್ಟು ಬಂದು ಉತ್ತಮ ಉದ್ಯೋಗಕ್ಕಾಗಿ ಹುಡುಕಾಡು ತ್ತಿದ್ದಾಗ ತಂಝೀಮ್ ಸಂಸ್ಥೆಯ ಸೇವೆಯನ್ನು ಮಾಡುವ ಸೌಭಾಗ್ಯ ನನಗೆ ದೊರಕಿತು. ಇದಕ್ಕಾಗಿ ದೇವರಿಗೆ ಕೃತಾರ್ಥನಾಗಿದ್ದೇನೆ" ಎಂದು ಹೇಳಿದರು. ಅವರ ಕಣ್ಣುಗಳಿಂದ ನೀರಿನ ಹನಿಗಳು ಉರುಳುತ್ತಿದ್ದವು.
ಕಾರ್ಯಕ್ರಮದಲ್ಲಿ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಉಪಾಧ್ಯಕ್ಷ ಅತಿಕುರ್ರಹ್ಮಾನ್ ಮುನಿರಿ, ಮರ್ಕಝಿ ಖಲಿಫಾ ಜಮಾತ್‌ನ ಪ್ರಧಾನ ಕಾಝಿ ಮೌಲಾನ ಖ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ, ಜಮಾಅತುಲ್ ಮುಸ್ಲಿಮೀನ್‌ನ ಪ್ರಾಧಾನ ಖಾಜಿ ಮೌಲಾನ ಅಬ್ದುಲ್ ರಬ್ ನದ್ವಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಮುಹಮ್ಮದ್ ಜಾಫರ್ ಅವರ ಸೇವೆಗೆ ತಂಝೀಮ್ ಸಂಸ್ಥೆಯು ಗೌರವ ಸಲ್ಲಿಸಿದ್ದು, ಅವರ ಜೀವನದ ಮುಖ್ಯ ಘಟ್ಟವನ್ನು ಗುರುತಿಸುವ ಮೂಲಕ ಒಂದು ಸಂದೇಶವನ್ನು ನೀಡಿದೆ.