ಭಟ್ಕಳ ದೋಣಿ ದುರಂತ: 3 ದಿನ ಕಳೆದರೂ ಪತ್ತೆಯಾಗದ ಮೂವರು ಮೀನುಗಾರರು
ಭಟ್ಕಳ: ತೆಂಗಿನಗುಂಡಿ ಸಮೀಪ ಅರಬ್ಬೀ ಸಮುದ್ರದಲ್ಲಿ ಬುಧವಾರ ಸಂಜೆ ಸಂಭವಿಸಿದ ದೋಣಿ ದುರಂತದಲ್ಲಿ ಸಮುದ್ರಪಾಲಾಗಿ ಕಣ್ಮರೆಯಾಗಿರುವ ಮೂವರು ಮೀನುಗಾರರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಇನ್ನೋರ್ವನ ಮೃತದೇಹ ಗುರುವಾರ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಶಿರಾಲಿ ಅಲ್ವೇಕೋಡಿ ಬಂದರಿನಿಂದ ಆರು ಮಂದಿ ಮೀನುಗಾರರು 'ಮಹಾಸತಿ ಗಿಲ್ನೆಟ್' ಎಂಬ ದೋಣಿಯಲ್ಲಿ ಜು.30ರಂದು ಅಪರಾಹ್ನ ಮೀನುಗಾರಿಕೆಗೆ ತೆರಳಿದ್ದರು. ದೋಣಿ ಸಮುದ್ರಕ್ಕೆ ಹೊರಟ ಸುಮಾರು ಅರ್ಧ ಗಂಟೆಯೊಳಗೆ ಅಂದರೆ ಸಂಜೆ 3:30ರ ಸುಮಾರಿಗೆ ಆರು ಮಂದಿ ಭಾರಿ ಮಳೆ ಮತ್ತು ದೊಡ್ಡ ಅಲೆಗಳಿಂದಾಗಿ ದೋಣಿ ಮಗುಚಿ ಬಿದ್ದಿತ್ತು. ಈ ಅವಘಡದಲ್ಲಿ ಮೀನುಗಾರರಾದ ರಾಮಕೃಷ್ಣ ಮೊಗೇರ (40, ಜಾಲಿ ಕೊಡಿ), ಸತೀಶ್ ತಿಮ್ಮಪ್ಪ ಮೊಗೇರ (26, ಅಲ್ವೇಕೋಡಿ), ಗಣೇಶ್ ಮಂಜುನಾಥ್ ಮೊಗೇರ (27, ಅಲ್ವೇಕೋಡಿ), ಮತ್ತು ನಿಶ್ಚಿತ್ ಮೊಗೇರ (30, ಮುರ್ಡೇಶ್ವರ) ಎಂಬವರು ನಾಪತ್ತೆಯಾಗಿದ್ದಾರೆ. ಮನೋಹರ್ ಈರಯ್ಯ ಮೊಗೇರ (31) ಮತ್ತು ರಾಮ ಮಸ್ತಿ ಖಾರ್ವಿ (43) ಎಂಬವರು ಪಾರಾಗಿದ್ದಾರೆ. ನಾಪತ್ತೆಯಾದವರ ಪೈಕಿ ರಾಮಕೃಷ್ಣ ಮೊಗೇರ (40)ರ ಮೃತದೇಹ ಜು.31ರಂದು ಮಧ್ಯಾಹ್ನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೊನ್ನೆಗದ್ದೆ ತೀರದಲ್ಲಿ ಪತ್ತೆಯಾಗಿದೆ.
*ಶೋಧ ಕಾರ್ಯ*: ನಾಪತ್ತೆಯಾದ ಉಳಿದ ಮೂವರು ಮೀನುಗಾರರಿಗಾಗಿ ಕರಾವಳಿ ಭದ್ರತಾ ಪೊಲೀಸರು, ಭಾರತೀಯ ಕರಾವಳಿ ರಕ್ಷಣಾ ದಳ, ಮೀನುಗಾರಿಕೆ ಇಲಾಖೆ, ಮತ್ತು ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಶನಿವಾರ ಡ್ರೋನ್ ಕ್ಯಾಮೆರಾಗಳನ್ನು ಬಳಸಿಕೊಂಡು ಶೋಧ ಕಾರ್ಯವನ್ನು ಮುಂದುವರಿಸಲಾಗಿದೆ.