ಉ.ಕನ್ನಡ ಜಿಲ್ಲಾದ್ಯಂತ 30 ಸಾವಿರಕ್ಕೂ ಹೆಚ್ಚು ಆಕ್ಷೇಪ ಪತ್ರಗಳ ಸಲ್ಲಿಕೆ : ರವೀಂದ್ರ ನಾಯ್ಕ
ಭಟ್ಕಳ,ನ.26 : ಅರಣ್ಯವಾಸಿಗಳ ಕಾನೂನು ಜಾಗೃತ ಜಾಥಾದ ಅಂಗವಾಗಿ ಕಾರವಾರದಲ್ಲಿ ಜರುಗಲಿರುವ ಬೃಹತ್ ಅರಣ್ಯವಾಸಿಗಳ ಸಮಾವೇಶದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾದ್ಯಂತ ಅರಣ್ಯ ಅತಿಕ್ರಮಣದಾರರ ಪರವಾಗಿ 30 ಸಾವಿರಕ್ಕೂ ಹೆಚ್ಚು ಆಕ್ಷೇಪ ಪತ್ರಗಳನ್ನು ಡಿ. 6ರಂದು ಜಿಲ್ಲಾಧಿಕಾರಿಗೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಂಟಗೋಡ ಮಹಾಸತಿ ದೇವಸ್ಥಾನದ ಆವರಣದಲ್ಲಿ ನಡೆದ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯ ಹಕ್ಕು ಕಾಯಿದೆಯ ಅನುಷ್ಠಾನದಲ್ಲಿನ ಗಂಭೀರ ವೈಫಲ್ಯಗಳನ್ನು ಉದಾಹರಿಸಿ, ನೈಜ ಅರಣ್ಯವಾಸಿಗಳು ತಮ್ಮ ಭೂಮಿ ಹಕ್ಕುಗಳಿಂದ ವಂಚಿತರಾಗುತ್ತಿರುವುದಾಗಿ ಆರೋಪಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನವನ್ನು ನಿರ್ಲಕ್ಷಿಸಿ, ಅರಣ್ಯ ಹಕ್ಕು ಸಮಿತಿಯು ಅರಣ್ಯವಾಸಿಗಳ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದು ದುಃಖಕರ. ತದ್ವಿರುದ್ಧವಾಗಿ, ಅರ್ಜಿಗಳ ಪುನರ್‌ಪರಿಶೀಲನೆಗೆ ಮುನ್ನವೇ ಅರಣ್ಯ ಇಲಾಖೆಯು ಅರಣ್ಯವಾಸಿಗಳ ಅರ್ಜಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಆರಂಭಿಸಿರುವುದು ಖಂಡನೀಯ ಹಾಗೂ ಕಾನೂನುಬಾಹಿರ ಕ್ರಮ ಅರಣ್ಯವಾಸಿಗಳಿಗೆ ಹಕ್ಕುಗಳ ಕುರಿತು ಕಾನೂನು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ರಾಜ್ಯವ್ಯಾಪಿ ಜಾಗೃತ ಜಾಥವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಭಟ್ಕಳ ತಾಲೂಕಿನ ಯಲ್ವೋಡಿಕವೂರು, ಮುಟ್ಟಳ್ಳಿ, ಕೋಣಾರ, ಹಾಡುವಳ್ಳಿ ಮತ್ತು ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾಗೃತ ಜಾಥ ಕಾರ್ಯಕ್ರಮಗಳು ನೆಡೆದವು.
ಈ ವೇಳೆ ಸಂಚಾಲಕರಾದ ಪಾಂಡು ನಾಯ್ಕ, ದೇವರಾಜ ಗೊಂಡ, ಚಂದ್ರ ನಾಯ್ಕ, ರಾಮ ನಾಯ್ಕ ಶಿರಜ್ಜಿಮನೆ, ಶಂಕರ ನಾಯ್ಕ (ಭಟ್ಕಳ), ಗಿರಿಜಾ ಮೋಗೇರ, ವಿಮಲಾ ಮೋಗೇರ, ನಾಗಮ್ಮ ಮೋಗೇರ, ನಾರಾಯಣ ಗೊರಟೆ, ಲಕ್ಷ್ಮೀ ಶಿರಜ್ಜಿ ಮನೆ, ನಾರಾಯಣ ಶನಿಯಾರ, ಕುಪ್ಪಯ್ಯ ನಾಯ್ಕ, ಮಂಜಪ್ಪ ಮುಡಗಾರಮನೆ, ವೆಂಕಟ, ಸುಬ್ರಾಯ ಕಟಗೇರಿ, ಜೋಗಿ ಶಿರಜ್ಜಿಮನೆ, ಚಂದ್ರು ಸೊಮಪ್ಪ ನಾಯ್ಕ, ರತ್ನಾ ನಾಯ್ಕ ಉಪಸ್ಥಿತರಿದ್ದರು.
ದಾಖಲೆ ಬೇಡಿಕೆ ಕಾನೂನುಬಾಹಿರ :
ಅರಣ್ಯ ಹಕ್ಕು ಸಮಿತಿಗಳು ಮೂರು ತಲೆಮಾರಿನ ದಾಖಲೆಗಳನ್ನು ಕೇಳುತ್ತಿರುವುದು ಅವೈಜ್ಞಾನಿಕ ಮತ್ತು ಕಾನೂನುಬಾಹಿರ ಕಾನೂನು ಮಾನ್ಯ ದಾಖಲೆಗಳ ಆಧಾರದ ಮೇಲೆ ಅರಣ್ಯ ಭೂಮಿ ಹಕ್ಕು ನೀಡುವಂತೆ ಆಗ್ರಹಿಸಿ ಈ ಬೇಡಿಕೆಯನ್ನು ಡಿ. 6ರಂದು ಕಾರವಾರದಲ್ಲಿ ಜರುಗಲಿರುವ ಮಹಾಸಮ್ಮೇಳನದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿರುವ ಆಕ್ಷೇಪ ಪತ್ರಗಳ ಮೂಲಕ ಗಟ್ಟಿಯಾಗಿ ಮಂಡಿಸಲಿದ್ದಾರೆ.