×
Ad

ಭಟ್ಕಳ: ಸೂಪರ್ ಮಾರ್ಕೆಟ್‌ನಲ್ಲಿ ಬೆಂಕಿ ಅವಘಡ

Update: 2025-08-25 18:11 IST

ಭಟ್ಕಳ: ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಝಾದ್ ನಗರದ ತಹಸೀನ್ ಸೂಪರ್ ಮಾರ್ಕೆಟ್‌ನಲ್ಲಿ ಸೋಮವಾರ ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 30 ಲಕ್ಷಕ್ಕೂ ಅಧಿಕ ರೂ. ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಸೂಪರ್ ಮಾರ್ಕೇಟ್ ನ ಮಾಲಕ ಇಫ್ತಿಖಾರ್ ರುಕ್ನುದ್ದೀನ್ ಮಾಹಿತಿ ನೀಡಿದ್ದಾರೆ.

ಕೋಲ್ಡ್ ಸ್ಟೋರೇಜ್ ಘಟಕದಿಂದ ಉಂಟಾದ ಬೆಂಕಿ ಗಾಳಿಯ ವೇಗದಿಂದ ಇಡೀ ಸೂಪರ್ ಮಾರ್ಕೆಟ್‌ಗೆ ಹರಡಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ತಕ್ಷಣವೇ ದಿನಸಿ ಸಾಮಗ್ರಿಗಳು, ತರಕಾರಿಗಳು, ಹಣ್ಣುಗಳು, ನಾಲ್ಕು ಏರ್ ಕಂಡಿಷನರ್ ಘಟಕಗಳು ಸೇರಿದಂತೆ ಇತರ ಸರಕುಗಳನ್ನು ಭಸ್ಮಗೊಳಿಸಿತು.

ದಟ್ಟ ಹೊಗೆ ಮತ್ತು ಜ್ವಾಲೆಗಳಿಂದಾಗಿ ಆಝಾದ್ ನಗರದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮನೆಮಾಡಿತು. ಪಕ್ಕದ ಬಹುಮಹಡಿ ಕಟ್ಟಡ ಓಷಿಯಾನಿಕ್‌ನ ಕೆಲವು ಕುಟುಂಬಗಳು ಸುರಕ್ಷತೆಗಾಗಿ ಮನೆಗಳಿಂದ ಹೊರಗೆ ಓಡಿಬಂದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಭಟ್ಕಳ, ಹೊನ್ನಾವರ ಮತ್ತು ಬೈಂದೂರಿನಿಂದ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಅಗ್ನಿಶಾಮಕ ಸಿಬ್ಬಂದಿ ಒಂದೂವರೆ ಗಂಟೆಗೂ ಅಧಿಕ ಕಾಲ ಶ್ರಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರಾದರೂ, ಸೂಪರ್ ಮಾರ್ಕೆಟ್‌ನ ಹೆಚ್ಚಿನ ಭಾಗ ಧ್ವಂಸವಾಗಿತ್ತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಆಸ್ತಿ ನಷ್ಟವು ಗಂಭೀರವಾಗಿದೆ.

ಅಗ್ನಿಶಾಮಕ ಸೌಲಭ್ಯದ ಕೊರತೆ: ಭಟ್ಕಳ ತಾಲೂಕಿನಲ್ಲಿ ಕೇವಲ ಒಂದೇ ಅಗ್ನಿಶಾಮಕ ವಾಹನ ಲಭ್ಯವಿದ್ದು, ಇಂತಹ ತುರ್ತು ಸಂದರ್ಭಗಳಲ್ಲಿ ಸ್ಥಳೀಯ ಜನತೆಗೆ ತೀವ್ರ ತೊಂದರೆಯಾಗುತ್ತಿದೆ. ಹೊನ್ನಾವರ ಮತ್ತು ಬೈಂದೂರಿ ನಿಂದ ವಾಹನಗಳು ಆಗಮಿಸುವಷ್ಟರಲ್ಲಿ ಬೆಂಕಿಯ ಪರಿಣಾಮ ಹೆಚ್ಚಾಗಿರುತ್ತದೆ. ಈ ಬಗ್ಗೆ ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿ, ಭಟ್ಕಳಕ್ಕೆ ಹೆಚ್ಚಿನ ಅಗ್ನಿಶಾಮಕ ವಾಹನಗಳನ್ನು ಒದಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಘಟನೆಯ ಸ್ಥಳಕ್ಕೆ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ವಿದ್ಯುತ್ ಇಲಾಖೆಯ ಸಿಬ್ಬಂದಿ ಶಾರ್ಟ್ ಸರ್ಕ್ಯೂಟ್‌ನ ನಿಖರ ಕಾರಣವನ್ನು ಕಂಡು ಹಿಡಿಯಲು ತನಿಖೆ ಆರಂಭಿಸಿದ್ದಾರೆ. "ಕೋಲ್ಡ್ ಸ್ಟೋರೇಜ್ ಘಟಕದಲ್ಲಿ ದೋಷಪೂರಿತ ವಿದ್ಯುತ್ ಸಂಪರ್ಕವೇ ಈ ಅವಘಡಕ್ಕೆ ಕಾರಣವಿರಬಹುದು," ಎಂದು ವಿದ್ಯುತ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.






 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News