×
Ad

ಹೊನ್ನಾವರ: ಸ್ನೇಹಿತನನ್ನು ಕೊಲ್ಲಲು ಹೋಗಿ ಅಮಾಯಕ ಯುವಕನನ್ನು ಸಾಯಿಸಿದ ದುಷ್ಕರ್ಮಿ!

Update: 2023-11-29 14:01 IST

ಸಾಂದರ್ಭಿಕ ಚಿತ್ರ

ಹೊನ್ನಾವರ, ನ.29: ಹಣಕಾಸು ವಿಚಾರದ ವೈಮನಸ್ಸು ಕಾರಣ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೇ ಹತ್ಯೆಗೈಯುವ ಯತ್ನದಲ್ಲಿ ವಿಫಲವಾಗಿ ಅಮಾಯಕ ಯುವಕನೋರ್ವನನ್ನು ಕೊಲೆಗೈದ ಘಟನೆ ಹೊನ್ನಾವರ ತಾಲೂಕಿನ ಅರೆಅಂಗಡಿಯ ಜನತಾ ಕಾಲನಿ ಬಳಿ ಮಂಗಳವಾರ ಸಂಜೆ ನಡೆದಿರುವುದು ವರದಿಯಾಗಿದೆ.

ಜನತಾ ಕಾಲನಿ ನಿವಾಸಿ, ಆಟೋ ರಿಕ್ಷಾ ಚಾಲಕ ಆಲ್ವಿನ್ ಲೋಬೊ(31) ಹತ್ಯೆಯಾದವರು. ಹಡಿನಬಾಳ ಗ್ರಾಮದ ವಿನಾಯಕ ನಾರಾಯಣ ಭಟ್(40) ಕೊಲೆ ಆರೋಪಿ ಎಂದು ಹೊನ್ನಾವರ ಪೊಲೀಸರು ತಿಳಿಸಿದ್ದಾರೆ.

ವಿನಾಯಕ ನಾರಾಯಣ ಭಟ್ ಮತ್ತು ಈ ಹಿಂದೆ ಆತನ ಸ್ನೇಹಿತನಾಗಿದ್ದ ಸಾಲ್ಕೋಡ ಗ್ರಾಮದ ಜನಾರ್ದನ ನಾಯ್ಕ ಎಂಬವರ ನಡುವೆ ಹಣಕಾಸು ವಿಚಾರವಾಗಿ ವೈಷಮ್ಯವಿತ್ತೆನ್ನಲಾಗಿದೆ. ಇದೇ ಕಾರಣಕ್ಕೆ ಮಂಗಳವಾರ ಸಂಜೆ ಜನತಾ ಕಾಲನಿ ಬಳಿ ಆಟೊ ಚಾಲಕ ಆಲ್ವಿನ್ ಲೋಬೊ ಅವರೊಂದಿಗೆ ಮಾತನಾಡುತ್ತಾ ನಿಂತಿದ್ದ ಜನಾರ್ದನರನ್ನು ಕೊಲೆಗೈಯಲು ವಿನಾಯಕ ನಾರಾಯಣ ಭಟ್ ಸಂಚು ರೂಪಿಸಿದ್ದ. ಅದರಂತೆ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ಆರೋಪಿ ವಿನಾಯಕ ನಾರಾಯಣ ಭಟ್ ಆಟೊ ರಿಕ್ಷಾದ ಮೇಲೆಯೆ ನುಗ್ಗಿಸಿದ್ದಾನೆ. ಲಾರಿಯ ಹೊಡೆತಕ್ಕೆ ಸಿಲುಕಿದ ಆಲ್ವಿನ್ ಲೋಬೊ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಜನಾರ್ದನ ಮತ್ತು ಅವರ ಜೊತೆಗಿದ್ದ ವಸಂತ ನಾಯ್ಕ ಎಂಬವರು ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ. ಕೊಲೆ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News