ಕೇಣಿ ಬಂದರು ವಿರೋಧಿ ಹೋರಾಟಕ್ಕೆ ಒಂದು ವರ್ಷ : ಅಂಕೋಲಾ ಸಂಪೂರ್ಣ ಬಂದ್, ಬೃಹತ್ ಪ್ರತಿಭಟನೆ
ಅಂಕೋಲಾ, ನ.25: ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ಬಂದರು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಒಂದು ವರ್ಷವಾದ ಹಿನ್ನಲೆಯಲ್ಲಿ ಹೋರಾಟಗಾರರು ಮಂಗಳವಾರ ಅಂಕೋಲಾ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ 3,000ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಸಂಘಟಕ ಸಂಜೀವ ಬಲೇಗಾರ ಮಾತನಾಡಿ, ಒಂದು ವರ್ಷದಿಂದ ವಿವಿಧ ಹಂತದ ಪ್ರತಿಭಟನೆ ಮಾಡುತ್ತಾ ಬಂದಿದ್ದು, ತಹಶೀಲ್ದಾರ ಕಚೇರಿ ಎದುರು ಕಳೆದ 14 ದಿನಗಳಿಂದ ಧರಣಿ ಹಮ್ಮಿಕೊಂಡಿದ್ದೆವು. ಆದರೆ ಯಾವ ಜನ ಪ್ರತಿನಿಧಿಗಳು ನಮಗೆ ಬಂದು ಬೆಂಬಲ ಸೂಚಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಂ ಗಾಂವ್ಕರ ಮಾತನಾಡಿ, ಈಗಾಗಲೇ ಸಾಕಷ್ಟು ಯೋಜನೆಗಳು ಉತ್ತರ ಕನ್ನಡದ ಬಹು ಭಾಗವನ್ನು ಆವರಿಸಿಕೊಂಡಿದೆ. ಈಗ ಮತ್ತೆ ಖಾಸಗಿ ಬಂದರು ನಿರ್ಮಾಣಕ್ಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ನಿರ್ಮಿಸಲು ಬಿಡುವುದಿಲ್ಲ ಎಂದರು. ನಿವೃತ್ತ ಸಾಗರ ವಿಜ್ಞಾನಿ ಡಾ. ವಿ. ಎನ್. ನಾಯಕ ಮಾತನಾಡಿ, ಕೇಣಿ ಬಂದರು ನಿರ್ಮಾಣವಾದರೆ 105 ಹಳ್ಳಿಗಳು ಮಾತ್ರ ಸಮಸ್ಯೆಗೆ ಸಿಲುಕುವುದಲ್ಲ, ಪಶ್ಚಿಮ ಘಟ್ಟಗಳಿಗೂ ಹಾನಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಬೊಮ್ಮು ಗೌಡ ಮಾತನಾಡಿ, ನಮ್ಮ ಸಮುದಾಯದ ಸಾಕಷ್ಟು ಫಲವತ್ತಾದ ಭೂಮಿಗಳು ಈ ಯೋಜನೆಗೆ ಭೂಸ್ವಾಧೀನವಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನಾವು ನಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದರು. ಪಪಂ ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ ಮಾತನಾಡಿ, ಒಂದು ವೇಳೆ ಯೋಜನೆ ಜಾರಿಗೊಂಡರೆ ಇಡೀ ಕರಾವಳಿ ಸೇರಿದಂತೆ ಅಂಕೋಲಾ ತಾಲೂಕು ಇನ್ನಿಲ್ಲವಾಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಮಾತನಾಡಿ, ಚಳಿಗಾಲದ ಅಧಿವೇಶನ ಸದ್ಯದಲ್ಲಿಯೇ ನಡೆಯಲಿದೆ. ನಾನು ಮುಖ್ಯಮಂತ್ರಿಯವರ ಬಳಿ ನಿಯೋಗ ಕರೆದುಕೊಂಡು ಹೋಗುತ್ತೇನೆ. ಹಾಗೇ ಕಾರವಾರದಲ್ಲಿಯೂ ಬಂದ್ ಮಾಡಿ ಪ್ರತಿಭಟನೆ ಮಾಡಬೇಕು ಎಂದು ತಿಳಿಸಿದರು.
ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ :
ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆಯ ತೀವ್ರತೆ ಹೆಚ್ಚುತ್ತಿದ್ದಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಹೋರಾಟಗಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಯವರು ಇದನ್ನು ಸರಕಾರಕ್ಕೆ ಕಳಿಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಶಿವಮೊಗ್ಗ ರೈತ ಸಂಘದ ಅಧ್ಯಕ್ಷ ದಿನೇಶ, ಕರವೇ ಅಧ್ಯಕ್ಷ ಭಾಸ್ಕರ ಪಟಗಾರ, ರಾಜು ಹರಿಕಂತ್ರ, ವಿಲಾಸ ನಾಯ್ಕ, ದಾಮೋದರ ಜಿ. ನಾಯ್ಕ, ಉದಯ ವಾಮನ ನಾಯ್ಕ, ಪ್ರಮೋದ ಬಾನಾವಳಿಕರ, ರಾಜೇಶ್ವರಿ ಕೇಣಿಕರ, ಮಾದೇವ ಗೌಡ, ರಮೇಶ ಎಸ್. ನಾಯ್ಕ, ಹೂವಾ ಖಂಡೇಕರ ಪಾಲ್ಗೊಂಡಿದ್ದರು.
ಅಹವಾಲು ಸಭೆಯಲ್ಲಿ ಸ್ಥಳೀಯರ ಅಭಿಪ್ರಾಯಗಳನ್ನು ವೀಡಿಯೊ ಚಿತ್ರಿಕರಣ ಹಾಗೂ ಲಿಖಿತವಾಗಿಯೂ ಬರೆದುಕೊಂಡಿದ್ದನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಕೇಂದ್ರಕ್ಕೆ ಅವರು ಕಳುಹಿಸಿದ್ದು ಇದುವರೆಗೂ ಯಾವುದೇ ಉತ್ತರ ಬಂದಿಲ್ಲ. ಬಂದ ನಂತರ ತಿಳಿಸುತ್ತೇನೆ.
-ಲಕ್ಷ್ಮೀಪ್ರೀಯಾ, ಉತ್ತರ ಕನ್ನಡ ಜಿಲ್ಲಾಧಿಕಾರಿ
ಮುಖ್ಯಾಂಶ :
► ಯಾವುದೇ ಕಾರಣಕ್ಕೂ ಸಮೀಕ್ಷೆ ನಡೆಸಬಾರದು.
► ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ.
► ಅಣಕು ಶವವಿಟ್ಟು ಪ್ರತಿಭಟನೆ.
► ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್