×
Ad

ಭಟ್ಕಳದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ; ಸರ್ಕಾರಿ ನೌಕರರ ಸಂಘದಿಂದ ಬೆಂಬಲ

Update: 2025-02-10 18:11 IST

ಭಟ್ಕಳ: ರಾಜ್ಯ ಸರ್ಕಾರವು ಕಳೆದ ಸೆಪ್ಟೆಂಬರ್‌ನಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದೆ ಇರುವ ಹಿನ್ನೆಲೆಯಲ್ಲಿ, ತಾಲೂಕಾ ಘಟಕದ ಗ್ರಾಮ ಆಡಳಿತಾಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕೈ ಹಾಕಿದ್ದಾರೆ. ತಮ್ಮ ಬೇಡಿಕೆಗಳನ್ನು ಒತ್ತಾಯಿಸಿ, ಪ್ರತಿಭಟನಾಕಾರರು ಕಪ್ಪುಪಟ್ಟಿ ಧರಿಸಿ, ಆಟೋ ರಿಕ್ಷಾ ಗಣೇಶೋತ್ಸವ ಮೈದಾನದಲ್ಲಿ ಮುಷ್ಕರ ಆರಂಭಿಸಿದರು.

ಪ್ರಮುಖ ಬೇಡಿಕೆಗಳು: ಪ್ರತಿಭಟನಾಕಾರರು ತಮ್ಮ ಕರ್ತವ್ಯ ನಿರ್ವಹಣೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಕೊರತೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಶನ್‌ಗಳ ನಿರ್ವಹಣೆಗೆ ಲ್ಯಾಪ್‌ಟಾಪ್, ಪ್ರಿಂಟರ್, ಇಂಟರ್‌ನೆಟ್, ಸ್ಕ್ಯಾನರ್ ಸೇರಿದಂತೆ ಅಗತ್ಯ ಪರಿಕರಗಳನ್ನು ಒದಗಿಸುವುದು ಹಾಗೂ ಕಚೇರಿಗಳ ವ್ಯವಸ್ಥೆಯನ್ನು ಸುಧಾರಿಸುವುದು ಅವರ ಪ್ರಮುಖ ಬೇಡಿಕೆಗಳಾಗಿವೆ.

ಅಲ್ಲದೆ, ಕಂದಾಯ ಇಲಾಖೆಯಲ್ಲಿ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ಪದೋನ್ನತಿ ಹಾಗೂ ವರ್ಗಾವಣೆ ಪ್ರಕ್ರಿಯೆಯನ್ನು ಪುನರಾರಂಭಿಸುವಂತೆ ಒತ್ತಾಯಿಸಲಾಯಿತು. ಕೆ.ಸಿ.ಎಸ್.ಆರ್. ನಿಯಮ 15ಎ ಉಪಖಂಡ (2) ಅನ್ನು ಹಿಂಪಡೆದು, ಸಮನ್ವಯ ಗೈಡ್‌ಲೈನ್ಸ್ ರೂಪಿಸುವಂತೆ ಸರ್ಕಾರವನ್ನು ಆಗ್ರಹಿಸಲಾಗಿದೆ.

ರಾಜ್ಯಾದ್ಯಂತ ಪತ್ತೆಯಾಗಿರುವ 51.5 ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ವಾರಸುದಾರರ ದಾಖಲೆ ಗಳಿಲ್ಲದೇ ಎನ್‌ಟ್ರಿ ಮಾಡುವ ಇ-ಪೌತಿ ಖಾತಾ ಆಂದೋಲನವನ್ನು ಸರ್ಕಾರ ಕೈಬಿಡಬೇಕು ಎಂಬುದು ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ.

ಕಳೆದ ಸೆಪ್ಟೆಂಬರ್ 26 ರಂದು ಈ ಸಂಬಂಧ ಗ್ರಾಮ ಆಡಳಿತಾಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿ, ಅ. 3 ರಂದು ಸರ್ಕಾರದ ಭರವಸೆಯಿಂದಾಗಿ ಮುಷ್ಕರವನ್ನು ಹಿಂಪಡೆಯಲಾಗಿತ್ತು. ಆದರೆ, ಸರ್ಕಾರ ಈವರೆಗೆ ಯಾವುದೇ ಭರವಸೆಗಳನ್ನು ಪೂರೈಸಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘದ ನಿರ್ಧಾರದಂತೆ ಪುನಃ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಗ್ರಾಮ ಆಡಳಿತಾಧಿಕಾರಿ ಜಿಲ್ಲಾ ಅಧ್ಯಕ್ಷ ಚಾಂಬಾಷಾ ತಿಳಿಸಿದ್ದಾರೆ.

ಸರ್ಕಾರಿ ನೌಕರರ ಸಂಘದಿಂದ ಬೆಂಬಲ: ಮುಷ್ಕರ ಸ್ಥಳಕ್ಕೆ ಭಟ್ಕಳ ಸರ್ಕಾರಿ ನೌಕರರು ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭ ತಾಲೂಕು ಸಂಘದ ಅಧ್ಯಕ್ಷೆ ಲತಾ ನಾಯ್ಕ, ಗ್ರಾಮ ಆಡಳಿತಾಧಿಕಾರಿಗಳಾದ ಚರಣ ಗೌಡ, ಗಣೇಶ್ ಕುಲಾಲ್, ವೀಣಾ ನಾಯ್ಕ, ತಿಪ್ಪಣ್ಣ, ವಿಜಯ್, ದಿವ್ಯ, ವಿನುತ, ಬೀಮಣ್ಣ, ಶಬಾನ ಬಾನು, ದೀಕ್ಷಿತ, ಸುನೀಲ್, ದೀಪ್ತಿ, ಐಶ್ವರ್ಯ, ಅಶ್ವಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News