×
Ad

ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಕಾನ್ಫರೆನ್ಸ್ ಉದ್ಘಾಟನೆ

Update: 2025-06-04 23:08 IST

ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್‌ಮೆಂಟ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಆಯೋಜಿಸಲಾದ ಎರಡು ದಿನಗಳ ಅಂತಾರಾಷ್ಟ್ರೀಯ ಕಾನ್ಫರೆನ್ಸ್ 'ಡಿ.ಎಂ.ಸಿ.ಎ.ಐ.ಸಿ.ಎಸ್-2025' ಚಂಡಿಗಢ ಯುನಿವರ್ಸಿಟಿಯ ಪ್ರೊಫೆಸರ್ ಡಾ. ಜಸ್ನೀತ್ ಕೌರ್ ಅವರಿಂದ ಉದ್ಘಾಟನೆಗೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಾ. ಜಸ್ನೀತ್ ಕೌರ್, ಭಟ್ಕಳದಂತಹ ಸ್ಥಳದಲ್ಲಿ ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಕಾನ್ಫರೆನ್ಸ್ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳು ಸ್ಥಳೀಯ ಯುವ ಪ್ರತಿಭೆಗಳಿಗೆ ಜ್ಞಾನವನ್ನು ವಿಸ್ತರಿಸಲು ಮತ್ತು ತಮ್ಮ ಕೌಶಲ್ಯವನ್ನು ಹೆಚ್ಚಿಸಲು ಅತ್ಯಂತ ಉಪಯುಕ್ತವಾಗಿವೆ ಎಂದು ತಿಳಿಸಿದರು. ಗ್ರೂವ್‌ಗೆ ಸಹಯೋಗ ದೊಂದಿಗೆ ಆಯೋಜಿತವಾದ ಈ ಕಾನ್ಫರೆನ್ಸ್ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು. ಈ ಸಂದರ್ಭದಲ್ಲಿ ಕಾನ್ಫರೆನ್ಸ್ ಕುರಿತ ಕೈಪಿಡಿಯೊಂದನ್ನು ಅವರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್ ಮಾತನಾಡಿ, "ನಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉತ್ತಮ ಬೋಧಕರ ತಂಡ ಮತ್ತು ಕ್ರಿಯಾಶೀಲ ಪ್ರಾಂಶುಪಾಲರ ನೇತೃತ್ವದಲ್ಲಿ ಈ ಕಾನ್ಫರೆನ್ಸ್ ಯಶಸ್ವಿಯಾಗಿ ಆಯೋಜನೆಗೊಂಡಿದೆ. ಗಣಿತ, ಕಂಪ್ಯೂಟಿಂಗ್, ಮ್ಯಾನೇಜ್‌ಮೆಂಟ್‌ನಂತಹ ವಿಷಯಗಳನ್ನು ಒಳಗೊಂಡ ಉಪನ್ಯಾಸ ಕಾರ್ಯ ಕ್ರಮಗಳು ವಿದ್ಯಾರ್ಥಿಗಳಿಗೆ ತಮ್ಮ ಸಂಶಯಗಳನ್ನು ನಿವಾರಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿವೆ," ಎಂದರು.

ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಡಾ. ಮನೋಜ್ ಅವರು ಪ್ರಥಮ ಸೆಶನ್ ನಡೆಸಿಕೊಟ್ಟರು. ವೇದಿಕೆಯಲ್ಲಿ ಎ.ಐ.ಟಿ.ಎಂ. ರಿಜಿಸ್ಟ್ರಾರ್ ಝಾಹಿದ್ ಹಸನ್ ಖರೂರಿ, ಪ್ರಾಂಶುಪಾಲ ಡಾ. ಕೆ. ಫಝ್ಲಿರ್‌ ರೆಹಮಾನ್ ಉಪಸ್ಥಿತರಿದ್ದರು. ಡಾ. ಕೆ. ಫಜ್ಲುರ್‌ರೆಹಮಾನ್ ಸ್ವಾಗತ ಭಾಷಣ ಮಾಡಿದರು. ಪ್ರೊ. ಪ್ರತಿಭಾ ಗಾಂವಕರ್ ಮತ್ತು ಪ್ರೊ. ಅರ್ಜು ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಡಾ. ಜೆ. ಅನ್ವರ್ ಸಾಥಿಕ್ ಮತ್ತು ಪ್ರೊ. ಡಾ. ಡೇನಿಯಲ್ ಫ್ರಾನ್ಸಿಸ್ ಸೆಲ್ವರಾಜ್ ಅತಿಥಿಗಳ ಪರಿಚಯ ಮಾಡಿದರು. ಪ್ರೊ. ವಸೀಮ್ ಅಹಮ್ಮದ್ ವಂದನಾ ಸಮರ್ಪಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News