×
Ad

ಭಟ್ಕಳದಲ್ಲಿ ಸಂಭ್ರಮದ ‘ಈದುಲ್ ಅಝ್‌ಹಾ’ ಆಚರಣೆ

Update: 2025-06-07 11:40 IST

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಈದುಲ್ ಅಝ್‌ಹಾ (ಬಕ್ರೀದ್) ಹಬ್ಬವನ್ನು ಶಾಂತಿಯುತವಾಗಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಭಟ್ಕಳದ ನವಾಯತ್ ಕಾಲನಿಯ ಮಸೀದಿಯಲ್ಲಿ ಸಾವಿರಾರು ಮಂದಿ ಈದ್ ನಮಾಝ್‌ ನಿರ್ವಹಿಸಿದರು. ಈ ಸಂದರ್ಭ ಮೌಲಾನಾ ಅನ್ಸಾರ್ ಖತೀಬ್ ಮದನಿ ಅವರು ಖುತ್ಬಾ ನೀಡಿ, ಈದ್ ಆಚರಣೆಯ ಸಂದರ್ಭದಲ್ಲಿ ಇತರರಿಗೆ ತೊಂದರೆಯಾಗದಂತೆ ಗಮನವಿರಿಸುವಂತೆ ಹಾಗೂ ಶಾಂತಿಯುತ ವಾತಾವರಣವನ್ನು ಕಾಪಾಡುವಂತೆ ಕರೆ ನೀಡಿದರು.

ಹುರುಳಿಸಾಲ್‌ನ ಆಹಮದ್ ಸಯೀದ್ ಜಾಮಿಯಾ ಮಸೀದಿಯಲ್ಲಿ ಮೌಲಾನಾ ಮುಹಮ್ಮದ್ ಜಾಫರ್ ನದ್ವಿ ಫಖ್ಖಿಭಾವ್ ಈದ್ ನಮಾಝ್‌ ಗೆ ನೇತೃತ್ವ ವಹಿಸಿ ಸಂದೇಶ ನೀಡಿದರು.

ಇಸ್ಲಾಮಿನ ಹಬ್ಬಗಳು ಶಾಂತಿ, ಪ್ರೀತಿ, ಮತ್ತು ತ್ಯಾಗದ ದ್ಯೋತಕವಾಗಿವೆ ಎಂದು ಹೇಳಿದ ಅವರು, "ಈದುಲ್-ಅಝ್‌ಹಾದಲ್ಲಿ ನೀಡಲ್ಪಡುವ ಬಲಿಯ ಮಾಂಸವು ಬಡವರು, ಸಂಬಂಧಿಕರು, ಮತ್ತು ನಿರ್ಗತಿಕರಿಗೆ ತಲುಪುತ್ತದೆ. ಇದರಿಂದ ಸಮಾಜದ ಎಲ್ಲ ವರ್ಗದವರೂ ಮಾಂಸದೂಟವನ್ನು ಸವಿಯುತ್ತಾರೆ" ಎಂದು ತಿಳಿಸಿದರು.

ಇದೇ ರೀತಿ, ಜಾಮಿಯಾ ಮಸೀದಿ ಚಿನ್ನದಪಳ್ಳಿಯಲ್ಲಿ ಮೌಲಾನಾ ಅಬ್ದುಲ್ ಅಲೀಂ ಖತೀಬಿ ನದ್ವಿ ಮತ್ತು ಮರ್ಕಝಿ ಖಲೀಫಾ ಜಾಮಿಯಾ ಮಸೀದಿಯಲ್ಲಿ ಮೌಲಾನಾ ಕ್ವಾಜಾ ಅಕ್ರಮಿ ಮದನಿ ನದ್ವಿ ಅವರು ಈದ್ ನಮಾಝ್‌ಗೆ ನೇತೃತ್ವ ವಹಿಸಿ ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ಸಾರಿದರು.

ಬೆಳಗ್ಗೆಯಿಂದಲೇ ಮುಸ್ಲಿಮ್ ಸಮುದಾಯದವರು ಶುಭ್ರ ಬಿಳಿ ಬಟ್ಟೆ ಧರಿಸಿ, ಸುಗಂಧ ಲೇಪಿತರಾಗಿ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಈದ್ ಆಚರಣೆಯ ಸಂದರ್ಭದಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡಲು ಸಮುದಾಯವು ವಿಶೇಷ ಕಾಳಜಿಯನ್ನು ವಹಿಸಿತು. ಈದುಲ್ ಅಝ್‌ಹಾ ಆಚರಣೆಯು ಭಟ್ಕಳದಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಒಗ್ಗಟ್ಟಿನ ಸಂಕೇತವಾಗಿ ನಡೆಯಿತು.

















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News