ಭಟ್ಕಳದಲ್ಲಿ ಭಾರೀ ಮಳೆ, ಗಾಳಿಯಿಂದ ವ್ಯಾಪಕ ಹಾನಿ: ಇಬ್ಬರು ಮೃತ್ಯು
ಭಟ್ಕಳ: ಭಟ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ರವಿವಾರ ಮಧ್ಯಾಹ್ನ ಭಾರೀ ಮಳೆಯೊಂದಿಗೆ ಬಿರುಗಾಳಿಯು ತೀವ್ರ ಆಕ್ರಮಣ ಮಾಡಿದ್ದು, ವ್ಯಾಪಕ ಆಸ್ತಿಪಾಸ್ತಿ ಹಾನಿಯ ಜೊತೆಗೆ ಇಬ್ಬರು ಮೃತಪಟ್ಟಿದ್ದಾರೆ.
ಬಿಲಾಲ್‌ಖಂಡ್ ಪ್ರದೇಶದ ನಿವಾಸಿ ಮಾದೇವ್ ನಾರಾಯಣ ದೇವಾಡಿಗ (50) ಭಾರೀ ಮಳೆಯ ಸಂದರ್ಭ ಗುಲ್ಮಿ-ಬಿಲಾಲ್‌ಖಂಡ್ ಪ್ರದೇಶದ ಕಾರ್ಖಾನೆಯ ಹಿಂಬದಿಯ ರಸ್ತೆಯಲ್ಲಿ ಮನೆಗೆ ತೆರಳುತ್ತಿದ್ದಾಗ ಮಳೆಗೆ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶಿರಾಲಿ-ಮಲ್ಲಾರಿ ಪ್ರದೇಶದ ನಿವಾಸಿ ಮಂಜುನಾಥ ಕುಪ್ಪ ನಾಯ್ಕ (45) ಅವರು ತಮ್ಮ ಮನೆಯ ಬಳಿ ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಲವಾರು ಮನೆಗಳ ಛಾವಣಿಗಳು ಹಾರಿಹೋಗಿದ್ದು, ಮರಗಳು ಧರೆಗುರುಳಿ ಮನೆಗಳ ಮೇಲೆ ಬಿದ್ದಿದ್ದರಿಂದ ಹಾನಿಯಾಗಿದೆ. ಅಂಗಡಿಗಳ ಫಲಕಗಳು ಕಿತ್ತುಕೊಂಡು ರಸ್ತೆಗಳ ಮೇಲೆ ಬಿದ್ದಿವೆ.
ಭಾರೀ ಮಳೆ ಮತ್ತು ಬಿರುಗಾಳಿಯಿಂದ ಭಟ್ಕಳದ ಹಲವಾರು ಗ್ರಾಮಗಳಲ್ಲಿ ಮನೆಗಳು, ದೇವಾಲಯ ಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಘಟನಾ ಸ್ಥಳಗಳಿಗೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದ್ದಾರೆ.