×
Ad

ಭಟ್ಕಳದಲ್ಲಿ ಭಾರಿ ಮಳೆಗೆ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿ

Update: 2025-06-16 19:58 IST

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ರವಿವಾರದಿಂದ ಜೋರಾಗಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ವಿದ್ಯುತ್ ವ್ಯವಸ್ಥೆಗೆ ಭಾರೀ ಹಾನಿಯಾಗಿದೆ. ಸೋಮವಾರವೂ ಮಳೆ ಮುಂದು ವರಿದಿದ್ದು, ಮುಂಡಳ್ಳಿ, ಮುಟ್ಟಳ್ಳಿ, ಬಸ್ತಿ ರೋಡ್, ಆಸರ ಕೇರಿ, ಚೌತನಿ, ಬೇಹಳ್ಳಿ, ಎಳಬಾರ, ಜೋಳದ ಮಲ್ಲೆ, ಕಲ್ಲಬೆ, ಸಬ್ಬತ್ತಿ, ಮಾರುಕೇರಿ, ಹೆಜ್ಜೆಲು, ಅತ್ತಿ, ಕಾಮೇಶ್ವರ, ಬಂಗ್ಲೋಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಒಟ್ಟು 53 ವಿದ್ಯುತ್ ಕಂಬಗಳು ಧರೆಗುರುಳಿವೆ. ಜೊತೆಗೆ ನಾಲ್ಕು ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಟ್ರಾನ್ಸ್‌ಫಾರ್ಮರ್ ರಚನೆಗಳಿಗೆ ಹಾನಿಯಾಗಿದ್ದು, ಅಂದಾಜು 12.5 ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕಿನ ಜಲಮೂಲಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟವನ್ನು ತಲುಪಿವೆ. ಮುಂಡಳ್ಳಿ ಮತ್ತು ಚೌತನಿಯನ್ನು ಸಂಪರ್ಕಿಸುವ ಸರಾಬಿ ನದಿಯಲ್ಲಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಈ ಭಾರಿ ಮಳೆ ಮತ್ತು ಗಾಳಿಯ ನಡುವೆಯೂ ತಾಲೂಕಾಡಳಿತ ಶಾಲೆಗಳಿಗೆ ರಜೆ ಘೋಷಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲಾ ಮಕ್ಕಳು ಮಳೆನೀರಿನಲ್ಲಿ ಸೈಕಲ್ ಓಡಿಸಿ, ನಡೆದುಕೊಂಡು ರಸ್ತೆ ದಾಟುವ ದೃಶ್ಯಗಳು ಸಾಮಾಜಿಕ ಜಾಲಾತಾಣ ಗಳಲ್ಲಿ ವೈರಲ್ ಆಗುತ್ತಿವೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ತಾಲೂಕಾಡಳಿತದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು, "ಮಳೆಯ ರಜೆ ಘೋಷಿಸುವ ಅಧಿಕಾರವನ್ನು ಆಯಾ ಶಾಲೆಗಳಿಗೆ ನೀಡಲಾಗಿದೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಶಾಲೆಗಳೇ ರಜೆ ಘೋಷಿಸ ಬಹುದು," ಎಂದು ತಿಳಿಸಿದ್ದಾರೆ. ಆದರೆ, ಈ ನಿರ್ಧಾರವು ಸಾರ್ವಜನಿಕರ ಕೋಪವನ್ನು ತಣ್ಣಗಾಗಿಸಿಲ್ಲ. ಭಾರಿ ಮಳೆಯಿಂದ ಉಂಟಾದ ತೊಂದರೆಗಳು ಮತ್ತು ಶಾಲಾ ರಜೆ ವಿವಾದದಿಂದ ತಾಲೂಕಾಡಳಿತದ ಮೇಲೆ ಒತ್ತಡ ಹೆಚ್ಚಿದೆ.

ಅಧಿಕಾರಿಗಳು ವಿದ್ಯುತ್ ಸಂಪರ್ಕ ಪುನರ್‌ಸ್ಥಾಪನೆಗೆ ತುರ್ತು ಕಾರ್ಯಾಚರಣೆ ಆರಂಭಿಸಿದ್ದಾರೆ. ಜನರಿಗೆ ಸುರಕ್ಷಿತವಾಗಿರುವಂತೆ ಮತ್ತು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News