ದೇಶದ ಮೊದಲ ಸಾವಯವ ತಾಲೂಕಾಗಿ ಜೋಯಿಡಾ ಪರಿವರ್ತನೆ: ಸಚಿವ ಚಲುವರಾಯ ಸ್ವಾಮಿ
ಜೋಯಿಡಾ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿರುವ ಭೂಮಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿ, ಸಾವಯವ ರೀತಿಯಲ್ಲಿ ಬಳಕೆ ಮಾಡುವ ಮೂಲಕ ದೇಶದ ಮೊದಲ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಮಂಗಳವಾರ ಜೋಯಿಡಾದಲ್ಲಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ ಶಿರಸಿ ಇವರ ಸಹಯೋಗದೊಂದಿಗೆ ಜೋಯಿಡಾ ತಾಲೂಕನ್ನು ಸಾವಯವ ತಾಲ್ಲೂಕನ್ನಾಗಿ ಪರಿವರ್ತಿ ಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೋಯಿಡಾ ತಾಲೂಕು ಶೇ.70ರಷ್ಟು ಅರಣ್ಯದಿಂದ ಕೂಡಿದ್ದು ಇಲ್ಲಿನ ವಾತಾವರಣ ಬೇರೆ ಕಡೆ ಎಲ್ಲೂ ನೋಡಲು ಸಾಧ್ಯವಿಲ್ಲ. ನೈಸರ್ಗಿಕವಾದ ಭೂಮಿ, ಅರಣ್ಯ ಪ್ರದೇಶ, ಪರಿಸರ ನೈಸರ್ಗಿಕ ಸಂಪತ್ತಿನಿಂದ ಕೂಡಿದ್ದು, ಇಲ್ಲಿನ ಭೂಮಿಯಲ್ಲಿ ರಾಸಾಯನಿಕವಲ್ಲದ ಕೃಷಿ ಚಟುವಟಿಯಲ್ಲಿ ತೊಡಗಿಸಿಕೊಂಡು, ಸಂಪೂರ್ಣ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸಲು ರೈತರ ಸಹಕಾರವು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಹಿಂದೆ ಸಾವಯವ ಗೊಬ್ಬರಗಳನ್ನು ಬಳಸಿಕೊಂಡು ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತಿತ್ತು, ನಂತರ ರಾಸಾಯನಿಕ ಗೊಬ್ಬರಗಳಿಗೆ ಮಾರು ಹೋಗಲಾಗಿದೆ. ಇದರ ದುಷ್ಪರಿಣಾಮಗಳ ಬಗ್ಗೆ ಕೃಷಿ ತಜ್ಞರು ಮತ್ತು ರೈತರು ಎಚ್ಚರಿಸುತ್ತಲೇ ಇದ್ದಾರೆ. ರೈತರು ರಾಸಾಯನಿಕ ಗೊಬ್ಬರ ಬಳಸುವುದನ್ನು ನಿಲ್ಲಿಸಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಸಿರಿಧ್ಯಾನದ ಬೆಳೆಗಳನ್ನು ಬೆಳೆಯುವ ಮೂಲಕ ರಾಸಾಯನಿಕದಿಂದ ಹೊರಬರಬೇಕು ಎಂದು ಚಲುವರಾಯಸ್ವಾಮಿ ಕರೆ ನೀಡಿದರು.
ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳನ್ನು ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತೆ, ಕಡಿಮೆ ಇಳುವರಿ, ಬೆಳೆ ನಾಶ ಮತ್ತು ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಇದನ್ನು ತಪ್ಪಿಸಲು ಕೃಷಿ ಪದ್ದತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಾವಯವ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರದಲ್ಲೂ ಕೃಷಿ ಹೊಂಡ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಈಗಾಗಲೇ 24 ಸಾವಿರ ಕೃಷಿ ಹೊಂಡ ಮಾಡಲಾಗಿದೆ. ಇನ್ನೂ ಮುಂದೆ ಹೆಚ್ಚಿನ ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು. ಕಬ್ಬು ಬೆಳೆಗಾರರಿಗೆ ಕಬ್ಬು ಕಟ್ಟಾವು ಮಾಡಲು ಯಂತ್ರೋಪಕರಣ ಖರೀದಿಸಲು 50 ಲಕ್ಷ ರೂ.ಗಳವರೆಗೆ ಸಬ್ಸಿಡಿ ನೀಡಲಾಗುತ್ತಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಜೊಯಿಡಾ ತಾಲೂಕಿನಲ್ಲಿ 2779 ಹೆಕ್ಟೇರ್ ಕೃಷಿ ಜಮೀನಿನ ಪೈಕಿ ಎರಡು ಸಾವಿರ ಹೆಕ್ಟೇರ್ ಅಲ್ಲಿ ಭತ್ತ, 60 ಹೆಕ್ಟೇರ್ ಅಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ವರ್ಷಕ್ಕೆ ಆರು ಸಾವಿರ ಕೆ.ಜಿ. ಜೇನು ಉತ್ಪಾದನೆ ಆಗುತ್ತಿದೆ. ತಾಲೂಕಿನಲ್ಲಿ ಕೇವಲ ಶೇ.6.7 ರಾಸಾಯನಿಕ ಬಳಕೆ ಆಗುತ್ತಿದೆ. ಅದೂ ಕಡಿಮೆ ಮಾಡಬೇಕು ಎಲ್ಲರೂ ಸಾವಯವ ತಾಲೂಕು ಮಾಡಲು ಸಿದ್ಧರಾಗಬೇಕು, ಯೋಜನೆ ಯಶಸ್ವಿಗೊಳಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದರು.
ಇನ್ನೂ ಹಳಿಯಾಳ ತಾಲೂಕಿನ ಹಲಸಿ ಗ್ರಾಮದಲ್ಲಿ ಮೆಕ್ಕೆ ಜೋಳ ಬಿತ್ತುವ ಮೂಲಕ ಮುಂಗಾರು ಬಿತ್ತನೆ ಅಭಿಯಾನಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಚಾಲನೆ ನೀಡಿದರು. ಈ ವೇಳೆ ಆರ್.ವಿ.ದೇಶಪಾಂಡೆ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರೀಯಾ ಕೃಷಿ ಸಚಿವರಿಗೆ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ.ಜಿ.ಟಿ ಪುತ್ರ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ, ಜೋಯಿಡಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಿಮಾ ತುಕಾರಾಮ ಮಿರಾಶಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ್, ಜಿಎಸ್‍ಎಸ್ ಸಂಸ್ಥೆಯ ನಮೃತಾ ಮತ್ತಿತರರು ಉಪಸ್ಥಿತರಿದ್ದರು.