×
Ad

ಭಟ್ಕಳ: ಬೈಕ್‌ ಗಳ ನಡುವೆ ಅಪಘಾತ; ಗುಂಡಿಗೆ ಬಿದ್ದು ಸವಾರರಿಬ್ಬರಿಗೆ ಗಾಯ

Update: 2025-06-19 19:08 IST

ಭಟ್ಕಳ: ಭಟ್ಕಳದ ಮುಖ್ಯ ರಸ್ತೆಯ ಸತ್ಕಾರ್ ಹೋಟೆಲ್ ಎದುರು ಎರಡು ಬೈಕ್‌ಗಳು ಮುಖಾಮುಖಿ ಯಾಗಿ ಢಿಕ್ಕಿಯಾಗಿ, ಒಬ್ಬ ಬೈಕ್ ಸವಾರನು ರಸ್ತೆ ಪಕ್ಕದ ಗುಂಡಿಗೆ ಬಿದ್ದ ಘಟನೆ ಗುರುವಾರ ಸಂಭವಿಸಿದೆ. ಈ ಘಟನೆಯಲ್ಲಿ ಎರಡೂ ಬೈಕ್ ಸವಾರರಿಗೆ ಗಾಯಗಳಾಗಿದ್ದು ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಕುರಿತ ವಿಡಿಯೋ ವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಎರಡು ಬೈಕ್‌ಗಳು ವೇಗವಾಗಿ ಚಲಿಸುತ್ತಿದ್ದಾಗ, ಸತ್ಕಾರ್ ಹೋಟೆಲ್ ಸಮೀಪ ಒಂದು ಬೈಕ್ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬಂದ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಒಬ್ಬ ಸವಾರ ತನ್ನ ಬೈಕ್‌ನಿಂದ ಎಸೆಯಲ್ಪಟ್ಟು ರಸ್ತೆಯ ಪಕ್ಕದಲ್ಲಿ ನಡೆಯುತ್ತಿದ್ದ ಒಂದು ಕಾಮಗಾರಿಯ ಗುಂಡಿಗೆ ಬಿದ್ದಿದ್ದಾನೆ. ಗುಂಡಿಯಲ್ಲಿ ಕೆಸರು ತುಂಬಿರುವುದರಿಂದ ಗಂಭೀರ ಗಾಯಗಳಿಂದ ಸವಾರ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯನ್ನು ಕಂಡ ಸ್ಥಳೀಯರು, ಗಾಯಗೊಂಡ ಸವಾರನನ್ನು ಗುಂಡಿಯಿಂದ ಹೊರತೆಗೆದು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಇನ್ನೊಬ್ಬ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತನಿಗೂ ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ ಕೆಲಕಾಲ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.

ವೇಗವಾಗಿ ಬೈಕ್ ಚಲಾಯಿಸುವುದು ಮತ್ತು ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಳ್ಳುವುದು ದುರ್ಘಟನೆಗೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ. ಹೆದ್ದಾರಿ ಪಕ್ಕದಲ್ಲೇ ಮಳೆನೀರು ಸಾರಾಗವಾಗಿ ಸಾಗಲು ಗುಂಡಿ ತೋಡುವ ಕಾಮಾಗಾರಿ ನಡೆಯುತ್ತಿದ್ದು ಅದನ್ನು ಮುಚ್ಚದಿರುವುದು ಅಥವಾ ಎಚ್ಚರಿಕೆಯ ಫಲಕವನ್ನು ಹಾಕದಿರುವುದನ್ನು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮುಖ್ಯ ರಸ್ತೆಯಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತವೆ. ವೇಗ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ, ರಸ್ತೆ ಕಾಮಗಾರಿಗಳ ಗುಂಡಿಗಳಿಗೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News