ಭಟ್ಕಳ: ಶಮ್ಸ್ ಪಿಯು ಕಾಲೇಜ್ ಹಾಗೂ ನ್ಯೂ ಶಮ್ಸ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮ
ಭಟ್ಕಳ: ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತರಬಿಯತ್ ಎಜ್ಯುಕೇಶನ್ ಸೂಸೈಟಿ ಆಡಳಿತ ಮಂಡಳಿಯಿಂದ ನಡೆಸಲ್ಪಡುತ್ತಿರುವ ಶಮ್ಸ್ ಪದವಿಪೂರ್ವ ಕಾಲೇಜು ಹಾಗೂ ನ್ಯೂ ಶಮ್ಸ್ ಸ್ಕೂಲ್ ನಲ್ಲಿ ಶನಿವಾರ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ (ಪಿ.ಎಸ್.ಐ) ಭರಮಪ್ಪ ಬೆಳಗಲಿ, ವಿದ್ಯಾರ್ಥಿಗಳಿಗೆ ಕಾನೂನಿನ ವಿವಿಧ ಅಂಶಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ರಸ್ತೆ ಸುರಕ್ಷತೆಯ ನಿಯಮಗಳು, ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳುವ ಜಾಗರೂಕತೆ, ಬಾಲಕಾರ್ಮಿಕ ಕಾನೂನು, ಪೋಕ್ಸೋ ಕಾಯ್ದೆ (POCSO Act), ಮತ್ತು ಕಾನೂನುಬಾಹಿರ ಚಟುವಟಿಕೆಗಳ ಕುರಿತು ವಿವರವಾಗಿ ತಿಳಿಸಿದರು.
ನಿಮ್ಮ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಗಾಂಜಾ, ಅಫೀಮು ಸೇವನೆ, ಇಸ್ಪೀಟ್ ಆಟ, ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ, ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ನಿಮ್ಮ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಶಮ್ಸ್ ಪದವಿಪೂರ್ವ ಕಾಲೇಜಿನ ಆಡಳಿತ ಪ್ರಾಂಶುಪಾಲ ಮುಹಮ್ಮದ್ ರಝಾ ಮಾನ್ವಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ತಿಳಿದುಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕು. ಇಂತಹ ಕಾರ್ಯಕ್ರಮಗಳು ಯುವ ಜನರಲ್ಲಿ ಸಾಮಾಜಿಕ ಜಾಗೃತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಎಂದರು.
ಈ ಸಂದರ್ಭ ತರಬಿಯತ್ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷ ಸೈಯ್ಯದ್ ಖುತುಬ್ ಬರ್ಮಾವರ್, ಕಾಲೇಜಿನ ಪ್ರಾಂಶುಪಾಲ ಲಿಯಾಕತ್ ಅಲಿ, ಉಪನ್ಯಾಸಕರಾದ ಅಬ್ದುಲ್ ಸುಭಾನ್ ನದ್ವಿ, ಮಂಜುನಾಥ್ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.