ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್: ಪದವಿ ಪ್ರದಾನ ಸಮಾರಂಭ
ಭಟ್ಕಳ: ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಗವಾದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (AITM), ಭಟ್ಕಳದಲ್ಲಿ 42ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭವು ರವಿವಾರ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು AHMನ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಪಿಲ್ಲೂರ್ ವಹಿಸಿದ್ದರು. ಡಾ. ಸಿ. ಗೋಪಾಲಕೃಷ್ಣನ್, ಜನರಲ್ ಮ್ಯಾನೇಜರ್, IIT ಮದ್ರಾಸ್ ಪ್ರವರ್ತಕ, ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡುತ್ತಾ, "ಮುಂದಿನ 10 ವರ್ಷಗಳು ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳನ್ನು ನೀಡಲಿವೆ. ಈ ಅವಕಾಶಗಳ ಜೊತೆಗೆ ಡೇಟಾ ಗೌಪ್ಯತೆ, ವೈಯಕ್ತಿಕ ಗೌಪ್ಯತೆ, ಮತ್ತು ಸೈಬರ್ ಭದ್ರತೆ ಯಂತಹ ಸವಾಲುಗಳನ್ನು ಎದುರಿಸಬೇಕಾಗಿದೆ. ಇವುಗಳನ್ನು ನಿಭಾಯಿಸುವುದು ನಿಮ್ಮ ವಿವೇಚನೆಗೆ ಬಿಟ್ಟಿದೆ," ಎಂದರು.
ಮೊಹಿದ್ದೀನ್ ರುಕನುದ್ದೀನ್, AITM ಬೋರ್ಡ್ ಕಾರ್ಯದರ್ಶಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ, "ನೀವೆಲ್ಲರೂ ವಿಶಿಷ್ಟರು ಮತ್ತು ಅನನ್ಯ ಸಾಮರ್ಥ್ಯವನ್ನು ಹೊಂದಿದ್ದೀರಿ. ಶೈಕ್ಷಣಿಕ ಅಂಕಗಳಿಂದ ನಿಮ್ಮನ್ನು ಅಳೆಯಬೇಡಿ; ಅವು ಕೇವಲ ಸೂಚನೆಯಷ್ಟೇ. ನಿಮ್ಮ ಕೌಶಲ್ಯ ಮತ್ತು ಸಾಧನೆಗಳನ್ನು ಜಗತ್ತಿಗೆ ತೋರಿಸಿ. ಕುರಾನ್‌ನಲ್ಲಿ ವಿಜ್ಞಾನದ ಜ್ಞಾನವಿದೆ; ಉದಾಹರಣೆಗೆ, ಬಿಗ್ ಬ್ಯಾಂಗ್ ಸಿದ್ಧಾಂತವು 1400 ವರ್ಷಗಳ ಹಿಂದೆಯೇ ವಿವರಿಸಲ್ಪಟ್ಟಿದೆ. ಜಗತ್ತನ್ನು ಅನ್ವೇಷಿಸಿ, ಜ್ಞಾನವನ್ನು ವಿಸ್ತರಿಸಿಕೊಳ್ಳಿ ಎಂದು ಕರೆ ನೀಡಿದರು.
ಗೌರವ ಅತಿಥಿಗಳಾಗಿ ಸದಗೋಪನ್ ರಾಜೇಶ್, ಸಹ-ಸಂಸ್ಥಾಪಕ, ರಾಮಾನುಜನ್ ಇನ್ಸ್ಟಿಟ್ಯೂಟ್ ಮತ್ತು ನಿರ್ದೇಶಕ, ಆರ್ಯಭಟ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕಲ್ ಸೈನ್ಸಸ್, ಚೆನ್ನೈ, ಹಾಗೂ ಬಾಲಾಜಿ ರಾಮಚಂದ್ರನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ನೂಬ್‌ಟ್ರಾನ್ ಪ್ರೈವೇಟ್ ಲಿಮಿಟೆಡ್ ಭಾಗವಹಿಸಿದ್ದರು.
ಸಮಾರಂಭದಲ್ಲಿ ಎಂ.ಬಿ.ಎ, ಎಂ.ಸಿ.ಎ ಮತ್ತು ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು ಮತ್ತು ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. AHMನ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಶಬಂದ್ರಿ, ಪ್ರಾಂಶುಪಾಲ ಡಾ. ಕೆ. ಫಝಲುರ್ ರಹಮಾನ್, ರಿಜಿಸ್ಟ್ರಾರ್ ಝಾಹಿದ್ ಖರೂರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.