ಮುರುಡೇಶ್ವರದಲ್ಲಿ ವೇಶ್ಯಾವಾಟಿಕೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಭಟ್ಕಳ: ಮುರುಡೇಶ್ವರದ ಜನತಾ ವಿದ್ಯಾಲಯದ ಎದುರಿಗಿರುವ ನಾಯ್ಕ ರೆಸಿಡೆನ್ಸಿ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ, ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಗಣೇಶ್ ನಾಯ್ಕ, ಸಿದ್ದಾಪುರ, ವಿನಾಯಕ ಮಹಾದೇವ್ ನಾಯ್ಕ, ಮುರುಡೇಶ್ವರ (ನಾಯ್ಕ್ ರೆಸಿಡೆನ್ಸಿ ಲಾಡ್ಜ್ ಮಾಲೀಕ) ಹಾಗೂ ರೂಮ್ ಬಾಯ್ ಆಕಾಶ್ ಅನಿಲ್, ಮುರುಡೇಶ್ವರ ಎಂದು ಗುರುತಿಸಲಾಗಿದೆ.
ಪಿಎಸ್‌ಐ ಹನಮಂತ ಬಿರಾದಾರ, ಮುರುಡೇಶ್ವರ ಠಾಣೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ನಡೆಸಿದ ದಾಳಿಯಲ್ಲಿ, ಕಲ್ಕತ್ತಾ ಮೂಲದ ಓರ್ವ ಮಹಿಳೆಯನ್ನು ಬೆಂಗಳೂರಿನಿಂದ ಆರ್ಥಿಕವಾಗಿ ದುರ್ಬಲ ಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು, ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ತಂದಿದ್ದ ಆರೋಪಿ ಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ 4,630 ನಗದು, ಎರಡು ಮೊಬೈಲ್ ಫೋನ್‌ಗಳು ಹಾಗು ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮುರುಡೇಶ್ವರ ಠಾಣೆಯಲ್ಲಿ ಗುನ್ನೆ ಸಂಖ್ಯೆ 67/2025ರ ಅಡಿಯಲ್ಲಿ BNS-2023 ಕಲಂ 143(1)(2), 144(2) rw 3(5) ಹಾಗೂ ಅನೈತಿಕ ವ್ಯಾಪಾರ ತಡೆ ಕಾಯ್ದೆ-1956 ಕಲಂ 3, 4ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ನೊಂದ ಮಹಿಳೆಯನ್ನು ಭಟ್ಕಳದ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.