×
Ad

ಭಟ್ಕಳ| ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಜಾಗೃತಿ ಜಾಥಾ

Update: 2025-06-26 19:36 IST

ಭಟ್ಕಳ: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಭಟ್ಕಳ ಶಹರ ಪೊಲೀಸ್ ಠಾಣೆಯ ವತಿಯಿಂದ ಇಂದು ಜಾಗೃತಿ ಜಾಥಾವನ್ನು ಆಯೋಜಿಸಲಾಗಿತ್ತು. ಈ ಕಾರ್ಯ ಕ್ರಮವು ಮಾದಕ ದ್ರವ್ಯಗಳ ಸೇವನೆ ಮತ್ತು ಅಕ್ರಮ ಸಾಗಾಟದ ವಿರುದ್ಧ ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿತ್ತು. ಶಮ್ಸುದ್ದಿನ್ ಸರ್ಕಲ್‌ನಿಂದ ಆರಂಭವಾದ ಈ ಜಾಗೃತಿ ಜಾಥಾ, ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಹಾಯಕ ಆಯುಕ್ತರ ಕಚೇರಿಯವರೆಗೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಡಿವೈಎಸ್‌ಪಿ ಮಹೇಶ್ ಎಂ.ಕೆ., ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶಾನುಭಾಗ, ಭಟ್ಕಳ ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ., ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು. ಜಾಥಾದ ನಂತರ ಸಹಾಯಕ ಆಯುಕ್ತರ ಕಚೇರಿಯಲ್ಲಿ ಆಯೋಜಿಸಲಾದ ಸಭೆಯಲ್ಲಿ ಈ ಗಣ್ಯರು ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ಅದನ್ನು ತಡೆಗಟ್ಟುವ ಕುರಿತು ಮಾತನಾಡಿದರು.

ತಹಸಿಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮಾತನಾಡಿ, "ಮಾದಕ ದ್ರವ್ಯಗಳ ಸೇವನೆಯು ವ್ಯಕ್ತಿಯ ಆರೋಗ್ಯ, ಕುಟುಂಬ ಮತ್ತು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಜಾಗೃತಿ ಮೂಡಿಸಬೇಕು," ಎಂದು ಕರೆ ನೀಡಿದರು. ಭಟ್ಕಳ ಸರ್ಕಾರಿ ಆಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುರಕ್ಷಿತ್ ಶೆಟ್ಟಿ ಮಾತನಾಡಿ ಮಾದಕ ವಸ್ತುಗಳ ಹಲವಾರು ವಿಧಗಳು ಮತ್ತು ಹಲವು ಮೂಲ ಗಳಿಂದ ಮಕ್ಕಳ ಕೈ ಸೇರಬಹುದು. ಒಮ್ಮೆ ಇದರ ವ್ಯಸನ ಅಂಟಿಕೊಂಟಿತು ಎಂದಾದರೆ ಅದರಿಂದ ಹೊರಬರಲು ಕಷ್ಟಸಾಧ್ಯ ಎಂದರು. ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶಾನುಭಾಗ, ಯುವಕರನ್ನು ಉದ್ದೇಶಿಸಿ, "ವಿದ್ಯಾರ್ಥಿಗಳು ಆರೋಗ್ಯಕರ ಜೀವನಶೈಲಿಯನ್ನು ಅಳವಡಿ ಸಿಕೊಂಡು ಮಾದಕ ದ್ರವ್ಯಗಳಿಂದ ದೂರವಿರಬೇಕು.ಯಾವುದೇ ಆಮೀಷಗಳಿಗೆ ಒಳಗಾಗದೆ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಡಿವೈಎಸ್‌ಪಿ ಮಹೇಶ್ ಎಂ.ಕೆ. ಭಟ್ಕಳ ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ., "ಪೊಲೀಸ್ ಇಲಾಖೆಯು ಮಾದಕ ದ್ರವ್ಯಗಳ ಅಕ್ರಮ ಸಾಗಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಆದರೆ, ಸಮಾಜದ ಸಹಕಾರವಿಲ್ಲದೆ ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಎಲ್ಲರೂ ಒಂದಾಗಿ ಕೆಲಸ ಮಾಡಬೇಕು," ಎಂದು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಭಟ್ಕಳದ ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News