×
Ad

ಭಟ್ಕಳದ ಡಾ. ಅರುಣ್ ಕುಮಾರ್ ವಿರುದ್ಧ ಸುಳ್ಳು ಆರೋಪ: ಜಿಲ್ಲಾಧಿಕಾರಿಗೆ ಮನವಿ

Update: 2025-06-27 18:30 IST

ಭಟ್ಕಳ: ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಅರುಣ್ ಕುಮಾರ್, 2023-24ನೇ ಸಾಲಿನ ಅತ್ಯುತ್ತಮ ವೈದ್ಯ ಪ್ರಶಸ್ತಿ ವಿಜೇತ, ಅವರ ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ಆರೋಪ ಗಳನ್ನು ಮಾಡಲಾಗಿದೆ ಎಂದು ಭಟ್ಕಳದ ಪ್ರಜ್ಞಾವಂತ ನಾಗರಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಯನ್ನು ಸಹಾಯಕ ಆಯುಕ್ತರ ಮೂಲಕ ಕಾರವಾರದ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ರವಾನಿಸಲಾಗಿದೆ.

ಡಾ. ಅರುಣ್ ಕುಮಾರ್ ಅವರು ಬಡ ರೋಗಿಗಳಿಗೆ ದೇವತಾ ಮನುಷ್ಯರಂತೆ ಸೇವೆ ಸಲ್ಲಿಸುತ್ತಿದ್ದು, ಶಸ್ತ್ರಚಿಕಿತ್ಸೆ ಸೇರಿದಂತೆ ಉನ್ನತ ಚಿಕಿತ್ಸೆಯನ್ನು ಒದಗಿಸುತ್ತಿದ್ದಾರೆ. ಆದರೆ, ಕೆಲವು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು, ರಾಜಕೀಯ ಸಂಘಟನೆಗಳೊಂದಿಗೆ ಕೈಜೋಡಿಸಿ, ಅವರನ್ನು ವರ್ಗಾವಣೆ ಮಾಡಿಸುವ ಉದ್ದೇಶದಿಂದ ಚಿಕ್ಕ ವಿಷಯಗಳನ್ನು ವೈಭವೀಕರಿಸಿ ಸುಳ್ಳು ದೂರುಗಳನ್ನು ನೀಡಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಾಗರಿಕರು ಈ ಆರೋಪಗಳನ್ನು ಸತ್ಯಕ್ಕೆ ದೂರವಾದವು ಎಂದು ಪರಿಗಣಿಸಿದ್ದು, ಸ್ಥಳೀಯ ತನಿಖೆ ಮತ್ತು ದಾಖಲೆ ಪರಿಶೀಲನೆಯ ಮೂಲಕ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡು ಆರೋಪಗಳನ್ನು ಕೈಬಿಡ ಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಒಂದು ವೇಳೆ ಡಾ. ಅರುಣ್ ವಿರುದ್ಧ ಕ್ರಮ ಕೈಗೊಂಡರೆ, ತೀವ್ರ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

ಭಟ್ಕಳದ ಜನತೆ ಡಾ. ಅರುಣ್ ಅವರ ಸಮರ್ಪಿತ ಸೇವೆಯನ್ನು ಗೌರವಿಸುತ್ತಿದ್ದು, ಅವರಿಗೆ ಮುಂದುವರಿಯಲು ಅವಕಾಶ ಕಲ್ಪಿಸಬೇಕೆಂದು ಕೋರಿದ್ದಾರೆ.

ಈ ಸಂದರ್ಭದಲ್ಲಿ ಆಟೋ- ಚಾಲಕ ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಪರಮೇಶ್ವರ್ ನಾಯ್ಕ ಕಂಡೇಕೋಡ್ಲು, ಶೇಷಗಿರಿ ನಾಯ್ಕ ಮುಟ್ಟಳ್ಳಿ, ಶ್ರೀನಿವಾಸ್ ನಾಯ್ಕ ಹನುಮಾನ್ ನಗರ, ಗಣೇಶ ಹಳ್ಳೆರ್ ಮುಂಡಳ್ಳಿ, ರಾಜು ನಾಯ್ಕ ಬೆಳಲಖಂಡ, ಬಾಬು ನಾಯ್ಕ ಕಾರಗದ್ದೆ, ಶಂಕರ್ ನಾಯ್ಕ ಕಡವಿನ ಕಟ್ಟಾ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News