ಭಟ್ಕಳ| ವಿದ್ಯೆಯೇ ಸಾಧಕನ ಸಂಪತ್ತು: ಈಶ್ವರ ನಾಯ್ಕ
ಭಟ್ಕಳ : "ವಿದ್ಯೆ ಸಾಧಕನ ಸೊತ್ತೇ ಹೊರತು, ಸೋಮಾರಿಯ ಸೊತ್ತಲ್ಲ" ಎಂದು ಖ್ಯಾತ ಯಕ್ಷಗಾನ ಕಲಾವಿದ ಈಶ್ವರ ನಾಯ್ಕ ಮಂಕಿ ಹೇಳಿದರು.
ಶ್ರೀ ಗುರು ವಿದ್ಯಾಧೀರಾಜ ದಿ ನ್ಯೂ ಇಂಗ್ಲೀಷ್ ಪಿ.ಯು ಕಾಲೇಜಿನಲ್ಲಿ ಆಯೋಜಿಸಿದ್ದ 2025ನೇ ಸಾಲಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಿದವನೇ ಸಮಾಜದಲ್ಲಿ ತನ್ನ ಗುರುತನ್ನು ಬಿಟ್ಟುಹೋಗುತ್ತಾನೆ. ವಿದ್ಯಾರ್ಥಿಗಳು ತಮ್ಮ ಪಿ.ಯು. ಜೀವನದಲ್ಲಿ ಅಧ್ಯಯನಶೀಲರಾಗಿ ಯಶಸ್ಸನ್ನು ಸಾಧಿಸಬೇಕೆಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಸೋನಾರಕೇರಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ರವಿ ನಾಯ್ಕ, ವಿದ್ಯಾರ್ಥಿಗಳ ನಿರಂತರ ಓದು ಅವರನ್ನು ಗುರಿಯತ್ತ ಮುಟ್ಟಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ವಹಿಸಿದ್ದರು. ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶ್ಯಾನಭಾಗ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ದ್ವಿತೀಯ ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಶ್ಯಾಮ ಮತ್ತು ತಂಡ ಪ್ರಾರ್ಥಿಸಿದರು, ನಿಧಿ ಆಚಾರ್ಯ ಸ್ವಾಗತಿಸಿದರು, ಶುಶೃತಾ ಜಿ.ಕೆ ವಂದಿಸಿದರು. ಕಾಮಾಕ್ಷಿ, ಯಜ್ಞಾ, ಕಾರ್ತಿಕ, ಶಶಾಂಕ, ಹರ್ಷನ್, ರೋಹಿತ್, ಸಹನಾ, ನಾಗಶ್ರೀ ಮತ್ತು ಅನನ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.