ಗೋಕರ್ಣದ ಕಾಡಿನ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ, ಇಬ್ಬರು ಮಕ್ಕಳ ರಕ್ಷಣೆ
ಗೋಕರ್ಣ: ರಾಮತೀರ್ಥ ಗುಡ್ಡದ ಮೇಲೆ ಕಾಡಿನ ಪ್ರದೇಶದೊಳಗೆ ಇರುವ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾ ದೇಶದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಘಟನೆ ಶನಿವಾರ ಬೆಳಕಿಗೆ ಬಂದಿದ್ದು, ಮಹಿಳೆಯ ವೀಸಾ ಅವಧಿ 2017ರಲ್ಲೇ ಮುಗಿದಿರುವುದು ಪತ್ತೆಯಾಗಿದೆ.
ಪ್ರವಾಸಿಗರ ರಕ್ಷಣೆಗಾಗಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ, ಗುಡ್ಡದ ತುದಿಯಲ್ಲಿ ಯಾರೋ ಅಪರಿಚಿತರು ವಾಸವಿರುವ ಬಗ್ಗೆ ಅನುಮಾನ ಬಂದಿದೆ. ಗುಡ್ಡದ ತುದಿಯನ್ನು ತಲುಪಿದಾಗ, ಅಲ್ಲಿ ಗುಹೆಯ ಸ್ವರೂಪದ ಕುಟೀರದಲ್ಲಿ 40 ವರ್ಷ ವಯಸ್ಸಿನ ನೀನಾ ಕುಟಿನಾ ಎಂಬ ರಷ್ಯಾ ಮೂಲದ ಮಹಿಳೆ ತನ್ನ ಆರು ವರ್ಷದ ಮಗಳು ಪ್ರೇಮಾ ಮತ್ತು ನಾಲ್ಕು ವರ್ಷದ ಮಗಳು ಅಮಾ ಜೊತೆ ವಾಸವಿದ್ದರು.
ಪೊಲೀಸರ ವಿಚಾರಣೆ ವೇಳೆ, ತಾನು ದೇವರ ಪೂಜೆ ಮತ್ತು ಧ್ಯಾನದಲ್ಲಿ ಆಸಕ್ತಿ ಹೊಂದಿರುವುದಾಗಿ ನೀನಾ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ಗೋವಾದಿಂದ ಮಕ್ಕಳೊಂದಿಗೆ ಗೋಕರ್ಣಕ್ಕೆ ಬಂದು ಗುಡ್ಡದ ಮೇಲಿರುವ ಗುಹೆಯಲ್ಲಿ ಉಳಿದುಕೊಂಡು ಪೂಜೆ ಹಾಗೂ ಧ್ಯಾನ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
ಅಪಾಯಕಾರಿ ಸ್ಥಳದಿಂದ ರಕ್ಷಣೆ
ನೀನಾ ವಾಸವಿದ್ದ ರಾಮತೀರ್ಥ ಗುಡ್ಡವು ಭೂಕುಸಿತದ ಅಪಾಯವಿರುವ, ಹಾವುಗಳು ಸೇರಿದಂತೆ ವಿಷಕಾರಿ ಜಂತುಗಳಿರುವ ಅಪಾಯಕಾರಿ ಸ್ಥಳವಾಗಿದೆ. ಈ ಅಪಾಯಗಳ ಬಗ್ಗೆ ಪೊಲೀಸರು ನೀನಾಗೆ ಮನವರಿಕೆ ಮಾಡಿಕೊಟ್ಟರು ಮತ್ತು ತಕ್ಷಣವೇ ಮಕ್ಕಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದರು.
ನಂತರ, ನೀನಾ ಕುಟಿನಾ ಮತ್ತು ಆಕೆಯ ಮಕ್ಕಳನ್ನು ಗುಹೆಯಿಂದ ಸುರಕ್ಷಿತವಾಗಿ ಕೆಳಗೆ ಕರೆತರಲಾಯಿತು. ಆಕೆಯ ಇಚ್ಛೆಯಂತೆ, ಅವರನ್ನು ಕುಮಟಾ ತಾಲೂಕಿನ ಬಂಕಿಕೋಡ್ಲು ಗ್ರಾಮದಲ್ಲಿರುವ ಎನ್.ಜಿ.ಓ. ಶಂಕರ ಪ್ರಸಾದ ಫೌಂಡೇಶನ್‌ಗೆ ಸಂಬಂಧಿಸಿದ ಸರಸ್ವತಿ ಸ್ವಾಮೀಜಿ ಆಶ್ರಮಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ನೀನಾಗೆ ಭದ್ರತೆ ಒದಗಿಸಿದ್ದರು.
ಪಾಸ್‌ಪೋರ್ಟ್ ಮತ್ತು ವೀಸಾ ವಿಚಾರಣೆ
ರಷ್ಯಾದ ನೀನಾ ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಭಾರತದಲ್ಲಿಯೇ ಉಳಿಯುವ ಉದ್ದೇಶದಿಂದ ತನ್ನ ಮತ್ತು ಮಕ್ಕಳ ಪಾಸ್‌ಪೋರ್ಟ್ ಹಾಗೂ ವೀಸಾ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಳು. ಇದರಿಂದಾಗಿ, ಮಹಿಳಾ ಪೊಲೀಸ್ ಅಧಿಕಾರಿಗಳು, ಯೋಗರತ್ನ ಸರಸ್ವತಿ ಸ್ವಾಮೀಜಿ (ಮಹಿಳಾ ಸ್ವಾಮೀಜಿ) ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜುಲೈ 9 ರಿಂದ ಮೂರು ದಿನಗಳ ಕಾಲ ಆಪ್ತ ಸಮಾಲೋಚನೆ ಮೂಲಕ ಮಾಹಿತಿ ಪಡೆಯಲು ಪ್ರಯತ್ನಿಸಿದರು.
ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ನೀನಾ, ತಾನು ವಾಸವಿದ್ದ ಕಾಡಿನೊಳಗಿನ ಗುಹೆಯಲ್ಲಿ ಅಥವಾ ಸಮೀಪದ ಕಾಡಿನಲ್ಲಿ ತನ್ನ ಪಾಸ್‌ಪೋರ್ಟ್ ಮತ್ತು ವೀಸಾ ಎಲ್ಲೋ ಬಿದ್ದಿರಬಹುದು ಎಂದು ಹೇಳಿದ್ದಾಳೆ. ನಂತರ, ನೀನಾ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಸುರಕ್ಷಿತವಾಗಿ ಇರಿಸಲಾಯಿತು.
ವೀಸಾ ಅವಧಿ ಮೀರಿರುವುದು ಪತ್ತೆ, ರಷ್ಯಾಕ್ಕೆ ವಾಪಸಾತಿ
ಗೋಕರ್ಣ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಗುಹೆಯ ಸುತ್ತಮುತ್ತ ಶೋಧ ಕಾರ್ಯಾಚರಣೆ ನಡೆಸಿದರು. ಈ ವೇಳೆ, ನೀನಾ ಕುಟಿನಾ ಅವರ ಪಾಸ್‌ಪೋರ್ಟ್ ಮತ್ತು ವೀಸಾ ಪತ್ತೆಯಾಯಿತು. ಪರಿಶೀಲನೆಯ ನಂತರ, ಅವರ ವೀಸಾ ಅವಧಿ ದಿನಾಂಕ 17-04-2017 ಕ್ಕೆ ಮುಕ್ತಾಯಗೊಂಡಿರುವುದು ಕಂಡುಬಂದಿದೆ.
ಈ ಕುರಿತು ಎಫ್‌ಆರ್‌ಆರ್‌ಓ (Foreigners Regional Registration Office) ಬೆಂಗಳೂರು ಕಚೇರಿಯನ್ನು ಸಂಪರ್ಕಿಸಿ ಪತ್ರ ವ್ಯವಹಾರ ನಡೆಸಲಾಗಿದೆ. ಅವಧಿ ಮೀರಿ ಭಾರತದಲ್ಲಿ ವಾಸವಿದ್ದ ರಷ್ಯಾ ಮೂಲದ ನೀನಾ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಅವರ ಮೂಲ ದೇಶವಾದ ರಷ್ಯಾಕ್ಕೆ ಮರಳಿ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಜುಲೈ 14 ರಂದು ನೀನಾ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳನ್ನು ಮಹಿಳಾ ಪೊಲೀಸ್ ಅಧಿಕಾರಿಗಳ ರಕ್ಷಣೆಯಲ್ಲಿ ಬೆಂಗಳೂರಿನ ಶಾಂತಿನಗರದಲ್ಲಿರುವ ಎಫ್‌ಆರ್‌ಆರ್‌ಓ ಕಚೇರಿಗೆ ಹಾಜರುಪಡಿಸಲು ಸಿದ್ಧತೆಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.