ಭಟ್ಕಳ: ನ್ಯೂ ಶಮ್ಸ್ ಶಾಲೆಯಲ್ಲಿ “ಮಿಷನ್ ಪ್ಲಾಂಟೇಷನ್’ ಅಭಿಯಾನಕ್ಕೆ ಚಾಲನೆ
ಭಟ್ಕಳ: ಹೆಬಳೆ ಗ್ರಾ.ಪಂ.ವ್ಯಾಪ್ತಿಯ ನ್ಯೂ ಶಮ್ಸ್ ಸ್ಕೂಲ್ ಶಾಲೆಯಲ್ಲಿ ಜು.13ರಿಂದ 31 ರ ವರೆಗೆ ನಡೆಯಲಿರುವ “ಮಿಷನ್ ಪ್ಲಾಂಟೇಷನ್” ಪರಿಸರ ಜಾಗೃತಿ ಶಿಭಿರಕ್ಕೆ ಭಾನುವಾರ ವಿದ್ಯಾರ್ಥಿ ಮತ್ತು ಪಾಲಕರಿಗೆ ಸಸಿ ವಿತರಣೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಜಮಾಆತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಪ್ರೋ. ರವೂಫ್ ಆಹಮದ್ ಸವಣೂರು, ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರದ್ಯಂತ ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಝೇಶನ್ ಸಹಯೋಗದೊಂದಿಗೆ “ಕೈ ಮಣ್ಣಿನೊಂದಿಗೆ ಹೃದಯ ಭಾರತದೊಂದಿಗೆ’ ಎಂಬ ಘೋಷ ವಾಕ್ಯದಡಿ ದೇಶದಾದ್ಯಂತ ಹತ್ತುಲಕ್ಷಕ್ಕೂ ಹೆಚ್ಚು ಗಿಡ ನೆಡುವ ಅಭಿಯಾನ ನಡೆಸುತ್ತಿದೆ. ಭಟ್ಕಳದಲ್ಲಿ ನ್ಯೂ ಶಮ್ಸ್ ಸ್ಕೂಲ್ ಸಹಯೋಗದೊಂದಿಗೆ ಈ ಆಭಿಯಾನ ಆರಂಭಗೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಚೇರ್ಮನ್ ನಝೀರ್ ಆಹ್ಮದ್ ಖಾಝಿ, ಪರಿಸರ ಸಂರಕ್ಷಣೆಗೆ ಇಸ್ಲಾಮ ಧರ್ಮ ಅತ್ಯಂತ ಮಹತ್ವ ನೀಡಿದೆ. ಇದೂ ಸಹ ಒಂದು ಆರಾಧನೆಯಾಗಿದೆ. ಪ್ರತಿ ವಿದ್ಯಾರ್ಥಿ ಮತ್ತು ಪಾಲಕರು ತಮ್ಮ ತಮ್ಮ ಮನೆಗಳಲ್ಲಿ ಒಂದೊಂದು ಮರ ಬೆಳೆಸಬೇಕಾಗಿದೆ ಇದರಿಂದಾಗಿ ಪರಸರದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕಡಿಮೆಯಾಗಿ ಜನರು ಆರೋಗ್ಯಯುತ ಜೀವನ ನಡೆಸಬಹುದಾಗಿದೆ ಎಂದರು. ಇನ್ನೂ ಕೆಲವೆ ವರ್ಷಗಳಲ್ಲಿ ಪರಿಸರ ಅಸಮತೋಲನದಿಂದ ದೇಶದ ಮತ್ತು ಜಗತ್ತಿನ ದೊಡ್ಡ ದೊಡ್ಡ ನಗರಗಳು ತೊಂದರೆ ಅನುಭವಿಸಲಿದೆ ಎಂದು ವರದಿಗಳು ಹೇಳುತ್ತಿವೆ. ನಾವು ಈಗಾಗಲೆ ಎಚ್ಚೆತ್ತುಕೊಳ್ಳದಿದ್ದರೆ ಆಪಾಯ ತಪ್ಪಿದ್ದಲ್ಲ ಎಂದರು.
ಪ್ರಾಂಶುಪಾಲ ಲಿಯಾಖತ್ ಅಲಿ ಅಭಿಯಾನದ ಮೂಲಕ ಏನೆಲ್ಲ ಗುರಿಗಳನ್ನು ಸಾಧಿಸಲಿಕ್ಕಿದೆ ಎಂಬ ಮಾಹಿತಿಯನ್ನು ವಿದ್ಯಾರ್ಥಿ ಮತ್ತು ಪಾಲಕರಿಗೆ ನೀಡಿದರು.
ಶಮ್ಸ್ ಪಿಯು ಕಾಲೇಜಿನ ಆಡಳಿತ ಪ್ರಾಂಶುಪಾಲ ಎಂ.ಆರ್.ಮಾನ್ವಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಭಿಯಾನ ಸಂಚಾಲಕ ಶಾಹಿದ್ ಖರೂರಿ ಧನ್ಯವಾದ ಅರ್ಪಿಸಿದರು. ಶಿಕ್ಷಕಿ ಉಮ್ಮೆ ಹಾನಿ ಕಾರ್ಯಕ್ರಮ ನಿರೂಪಿಸಿದರು.