×
Ad

ಭಟ್ಕಳ| ಡಾ.ದಾಮೋದರ ನಾಯ್ಕ ವಿಶ್ವ ಜಲವಿದ್ಯುತ್‌ ಸಮ್ಮೇಳನದಲ್ಲಿ ಭಾಗಿ

Update: 2025-07-13 22:19 IST

ಭಟ್ಕಳ: ಆಫ್ರಿಕಾದ ಘಾನಾದ ರಾಜಧಾನಿ ಅಕ್ರಾದಲ್ಲಿ ಜುಲೈ 14ರಿಂದ 19ರವರೆಗೆ ನಡೆಯಲಿರುವ ‘ವಿಶ್ವ ಜಲವಿದ್ಯುತ್‌ ಸಮ್ಮೇಳನ (AFRICA 2025)’ದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ತಂಡದಲ್ಲಿ ಭಟ್ಕಳ ಮೂಲದ ಕನ್ನಡಿಗ, ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಡಾ. ಎ.ಟಿ. ದಾಮೋದರ ನಾಯ್ಕ ಭಾಗವಹಿಸಲಿದ್ದಾರೆ.

ಅಂತರಾಷ್ಟ್ರೀಯ ಬೃಹತ್‌ ಆಣೆಕಟ್ಟುಗಳ ಜಲವಿದ್ಯುತ್‌ ಸಮಿತಿಯ (ICOLD) ಭಾರತದ ಶಾಶ್ವತ ಪ್ರತಿನಿಧಿ ಸದಸ್ಯರಾಗಿರುವ ಡಾ. ನಾಯ್ಕ, ಪ್ರಸ್ತುತ ಅರುಣಾಚಲ ಪ್ರದೇಶ ರಾಜ್ಯ ಸರ್ಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸಮ್ಮೇಳನವು ಜುಲೈ 14ರಿಂದ 16ರವರೆಗೆ ಅಕ್ರಾದ ಲಬಾಡಿ ಬೀಚ್‌ ರೆಸಾರ್ಟ್‌ನಲ್ಲಿ ನಡೆಯಲಿದೆ. 47 ರಾಷ್ಟ್ರಗಳಿಂದ 300ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ, ಡಾ. ಎ.ಟಿ. ದಾಮೋದರ ನಾಯ್ಕ ನೇತೃತ್ವದ ಭಾರತೀಯ ತಂಡವು ಭಾರತದ ಬೃಹತ್‌ ಆಣೆಕಟ್ಟು ಜಲವಿದ್ಯುತ್‌ ಸ್ಥಾವರಗಳ ಆಧುನಿಕ ತಂತ್ರಜ್ಞಾನದ ಯಶಸ್ಸಿನ ಕಥೆಯನ್ನು ವಿಶ್ವ ಮಟ್ಟದಲ್ಲಿ ಇತರ ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಿದೆ. ಭಾರತದ ಜಲವಿದ್ಯುತ್‌ ಯೋಜನೆಗಳು, ವಿಶೇಷವಾಗಿ ಆಧುನಿಕ ಹೈಬ್ರಿಡ್‌ ಯೋಜನೆಗಳಾದ ಸೌರ-ಜಲವಿದ್ಯುತ್‌ ಸಂಯೋಜನೆ, ಗ್ರಾಮೀಣ ವಿದ್ಯುದೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ತೋರಿದ ಸಾಧನೆಗಳನ್ನು ಈ ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುವುದು.

ಡಾ. ಎ.ಟಿ. ದಾಮೋದರ ನಾಯ್ಕ, ತಮ್ಮ ತಾಂತ್ರಿಕ ಮತ್ತು ಪರಿಸರ ಸಂರಕ್ಷಣೆಯ ಕ್ಷೇತ್ರದ ವ್ಯಾಪಕ ಅನುಭವದಿಂದ, ಈ ಸಮ್ಮೇಳನದಲ್ಲಿ ಭಾರತದ ಜಲವಿದ್ಯುತ್‌ ಯೋಜನೆಗಳ ಸುಸ್ಥಿರತೆ ಮತ್ತು ತಾಂತ್ರಿಕ ಆವಿಷ್ಕಾರಗಳ ಕುರಿತು ಪ್ರಮುಖ ಚರ್ಚೆಗಳನ್ನು ಮುನ್ನಡೆಸಲಿದ್ದಾರೆ. ಅವರ ಭಾಗವಹಿಸುವಿಕೆಯು ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಭಾರತದ ಜಲವಿದ್ಯುತ್‌ ಕ್ಷೇತ್ರದ ಗಮನಾರ್ಹ ಸಾಧನೆಗಳನ್ನು ವಿಶ್ವದಾದ್ಯಂತ ತಿಳಿಸುವ ಅವಕಾಶವನ್ನು ಒದಗಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News