×
Ad

ಮಾಜಿ ಸಂಸದ ಅನಂತ್‌ ಕುಮಾರ್ ಹೆಗಡೆಗೆ ಜೀವ ಬೆದರಿಕೆ ಆರೋಪ: ಪ್ರಕರಣ ದಾಖಲು

Update: 2025-07-18 21:54 IST

ಅನಂತ್‌ ಕುಮಾರ್‌ ಹೆಗಡೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಾಜಿ ಸಂಸದ ಹಾಗೂ ಮಾಜಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಅವರಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಸಂದೇಶ ಬಂದಿರುವ ಬಗ್ಗೆ ವರದಿಯಾಗಿದೆ.

ಈ ಬಗ್ಗೆ ಅವರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂಬೈನ 76 ವರ್ಷದ ವಿನಿತ ಕಜೇರಿಯಾ ಎಂಬಾತನ ವಿರುದ್ಧ ಜೀವ ಬೆದರಿಕೆ ಹಾಕಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜೂ.24ರಂದು ಅನಂತ್‌ ಕುಮಾರ್ ಹೆಗಡೆ ಅವರಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಸಂದೇಶ ಬಂದಿತ್ತು. ಈ ಸಂದೇಶದ ಕುರಿತು ನ್ಯಾಯಾಲಯದ ಅನುಮತಿ ಪಡೆದ ನಂತರ, ಜು.18ರಂದು ಸುರೇಶ್ ಶೆಟ್ಟಿ ಅವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ವಿನಿತ ಕಜೇರಿಯಾ ಎಂಬಾತನನ್ನು ಗುರುತಿಸಲಾಗಿದ್ದು, ಈತನಿಂದ ಬಂದ ಬೆದರಿಕೆಯ ಇ-ಮೇಲ್‌ನ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಡಾಬಸ್‌ಪೇಟೆಯಲ್ಲಿ ಕಾರು ಓವರ್‌ಟೇಕ್ ವಿಚಾರಕ್ಕೆ ಸಂಬಂಧಿಸಿದಂತೆ ಹೆಗಡೆ ಮತ್ತು ಅವರ ಬೆಂಬಲಿಗರ ವಿರುದ್ಧ ಹಲ್ಲೆ ಆರೋಪದಡಿ ದೂರು ದಾಖಲಾಗಿತ್ತು. ಸೈಫ್ ಖಾನ್ ಎಂಬವರು ದೂರು ನೀಡಿದ್ದು, ಹೆಗಡೆ ಅವರ ಗನ್‌ಮ್ಯಾನ್ ಶ್ರೀಧರ್ ಮತ್ತು ಚಾಲಕ ಮಹೇಶ್‌ನನ್ನು ಪೊಲೀಸರು ಬಂಧಿಸಿ ದ್ದರು. ಈ ಪ್ರಕರಣದಲ್ಲಿ ಹೆಗಡೆ ಅವರಿಗೆ ನೋಟಿಸ್ ಜಾರಿಯಾಗಿತ್ತು ಮತ್ತು ಜು.7ರಂದು ಅವರು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು.

ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ, ತನಿಖೆಯನ್ನು ತೀವ್ರಗೊಳಿಸಲಾ ಗಿದೆ. ಆರೋಪಿ ವಿನಿತ ಕಜೇರಿಯಾ ವಿರುದ್ಧ ಭಾರತೀಯ ದಂಡ ಸಂಹಿತೆಯ (BNS) ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News