ಭಟ್ಕಳ: ನಾಮಧಾರಿ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಭಟ್ಕಳ: ನಾಮಧಾರಿ ಸಮಾಜದ ಗುರುಮಠ ವ್ಯಾಪ್ತಿಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ರವಿವಾರ ಬೆಳಿಗ್ಗೆ ನಗರದ ಆಸರಕೇರಿಯ ಗುರುಮಠದ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ರಾಣೆ ಬೆನ್ನೂರಿನ ಕೆನರಾ ಇ-ವಿಶನ್‌ನ ಅಧ್ಯಕ್ಷ ಹಾಗೂ ಪ್ರಾಂಶುಪಾಲ ಪ್ರಕಾಶ ನಾಯ್ಕ ಉದ್ಘಾಟಿಸಿದರು.
ಉದ್ಘಾಟನಾ ಭಾಷಣದಲ್ಲಿ ಪ್ರಕಾಶ ನಾಯ್ಕ, "ಸಮಾಜದಿಂದ ಪಡೆದ ಪುರಸ್ಕಾರವನ್ನು ಪುನಃ ಸಮಾಜದ ವಿದ್ಯಾರ್ಥಿಗಳಿಗೆ ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು. 35 ವರ್ಷಗಳ ಹಿಂದೆ ಈ ಸಭಾಭವನದಲ್ಲಿ ನಾನೂ ಪ್ರತಿಭಾ ಪುರಸ್ಕಾರ ಪಡೆದಿದ್ದೆ. ಇಂದು ನನ್ನ ಸಂಸ್ಥೆಯನ್ನು ಸ್ಥಾಪಿಸಿ, ಸಮಾಜದ ಮುಂದೆ ನಿಲ್ಲಲು ಹೆಮ್ಮೆಯಾಗುತ್ತಿದೆ. ಇದಕ್ಕೆ ಶಿಕ್ಷಣವೇ ಕಾರಣ. ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಯಲ್ಲಿ ಎರಡು ವರ್ಷಗಳ ಉಚಿತ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗುವುದು," ಎಂದರು. ಶಿಕ್ಷಕರು ಮತ್ತು ಪಾಲಕರಿಗೆ ಗೌರವ ನೀಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಒತ್ತಿ ಹೇಳಿದ ಅವರು, ಸಮಾಜವು ಶಿಕ್ಷಣ ಸಂಸ್ಥೆ ಸ್ಥಾಪಿಸಿದರೆ ತಾವೂ ಸಹಕಾರ ನೀಡಲು ಸಿದ್ಧವಿರುವುದಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರಿನ ಎಕ್ಸ್‌ಫರ್ಟ್ ಕಾಲೇಜಿನ ಉಪಪ್ರಾಂಶುಪಾಲ ಗುರುದತ್ತ ನಾಯ್ಕ, "ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ. ನನಗೆ ಕಲಿ ಸಿದ ಗುರುಗಳ ಜೊತೆ ವೇದಿಕೆ ಹಂಚಿಕೊಳ್ಳುವುದು ಜೀವನದ ಶ್ರೇಷ್ಠ ಕ್ಷಣ. ಶಿಕ್ಷಣವೇ ಜೀವನದ ಅತ್ಯ ಮೂಲ್ಯ ಸಂಪತ್ತು. ಇಂದಿನ ಶಿಕ್ಷಣ ಕೇವಲ ಪ್ರಮಾಣಪತ್ರ ಪಡೆಯುವುದಕ್ಕೆ ಸೀಮಿತವಾಗದೆ, ಜೀವನ ಕಟ್ಟಿಕೊಳ್ಳಲು ಉಪಯುಕ್ತವಾಗಿರಬೇಕು. ಸರಿಯಾದ ನಿರ್ಧಾರ, ಮಾರ್ಗದರ್ಶನ ಮತ್ತು ಗುರಿಯೊಂದಿಗೆ ಶಿಕ್ಷಣ ಪಡೆದರೆ ಯಶಸ್ಸು ಸಾಧ್ಯ," ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, "ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಿದಾಗ ತಂದೆ-ತಾಯಿ ಮತ್ತು ಸಮಾಜವನ್ನು ಮರೆಯಬಾರದು. ಪ್ರತಿಭಾ ಪುರಸ್ಕಾರದಿಂದ ಪ್ರೇರಿತರಾಗಿ, ಮುಂದೆ ಸಮಾಜದ ಇತರ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು," ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳು, ಸಾಧಕರು ಹಾಗೂ ಹೊಸದಾಗಿ ಉದ್ಯೋಗಕ್ಕೆ ಸೇರಿದವರನ್ನು ಸನ್ಮಾನಿಸಲಾಯಿತು.
ದುರ್ಗಾದಾಸ ನಾಯ್ಕ ಪ್ರಾರ್ಥನೆ ಹಾಡಿದರು. ಗುರುಮಠ ದೇವಸ್ಥಾನದ ಕಾರ್ಯದರ್ಶಿ ಡಿ.ಎಲ್. ನಾಯ್ಕ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಕೆ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರೆ, ಶಂಕರ ನಾಯ್ಕ ವಂದನಾರ್ಪಣೆ ಮಾಡಿದರು.