ಭಟ್ಕಳ| ಮಾಧ್ಯಮ ಕ್ಷೇತ್ರ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕ ಮೂಡುತ್ತಿದೆ: ಅರುಣ್ ಶಿರೂರು
ಭಟ್ಕಳ: ಮಾಧ್ಯಮ ಕ್ಷೇತ್ರವು ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡುತ್ತಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಶಿರೂರು ಹೇಳಿದರು.
ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಮಂಗಳವಾರ ಸಾಗರ ರಸ್ತೆಯ ದಿ.ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು 'ಪತ್ರಿಕೋದ್ಯಮದ ಆಗುಹೋಗುಗಳು' ಕುರಿತು ಉಪನ್ಯಾಸ ನೀಡಿದರು.
ಪತ್ರಕರ್ತರಿಗೆ ವಿಶೇಷ ಅಧಿಕಾರಗಳಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪತ್ರಕರ್ತರು ಸಾಮಾಜಿಕ ಬದ್ಧತೆಯುಳ್ಳ ಸಾಮಾನ್ಯರಂತೆಯೇ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪತ್ರಿಕೋದ್ಯಮದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಭಟ್ಕಳ ಉಪವಿಭಾಗದ ಸಹಾಯಕ ಅರಣ್ಯಾಧಿಕಾರಿ ಗಿರೀಶ್ ಪಿ.ಬಿ. ಮಾತನಾಡಿ, ಡಿಜಿಟಲ್ ಮಾಧ್ಯಮದ ಆಗಮನದಿಂದ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಪತ್ರಿಕೆ ಓದಿಗೆ ಒತ್ತು ನೀಡಿದರೆ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಆರ್. ಮಾನ್ವಿ, ಮಾಧ್ಯಮಗಳು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. 1993ರ ಗಲಭೆ ಸಂದರ್ಭದಲ್ಲಿ ಭಟ್ಕಳದ ಪತ್ರಕರ್ತರು ಶಾಂತಿ ಕಾಪಾಡಲು ಶ್ರಮಿಸಿದ್ದು ಇದಕ್ಕೆ ಉದಾಹರಣೆ ಎಂದರು.
ಸನ್ಮಾನ ಸಮಾರಂಭ: ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ತೊಡಗಿರುವ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ., ಅರಣ್ಯ ಅತಿಕ್ರಮಣ ದಾರರ ಪರ ಹೋರಾಟಗಾರ ರಾಮಾಮೊಗೇರ್ ಹಾಗೂ 50 ವರ್ಷಗಳಿಂದ ಪತ್ರಿಕಾ ವಿತರಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾನ್ಸಿಸ್ ಡಿ’ಸೋಜಾ ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ: ಕಾರ್ಯನಿರತ ಸಂಘದ ಮಕ್ಕಳಿಗಾಗಿ ನೀಡುವ ಪ್ರತಿಭಾ ಪುರಸ್ಕಾರದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆಗೈದ ಸುಜನ್ ಮನಮೋಹನ್ ನಾಯ್ಕ ಹಾಗೂ ರಾಷ್ಟ್ರೀಯ-ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಸಾಧನೆಗೈದ ಪ್ರಣವಿ ರಾಮಚಂದ್ರ ಕಿಣಿ ಅವರನ್ನು ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ನಿಕಟಾಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್, ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶಾನುಭಾಗ ಮಾತನಾಡಿದರು. ಸಂಘದ ಉಪಾಧ್ಯಕ್ಷ ಮೋಹನ್ ನಾಯ್ಕ ಸ್ವಾಗತಿಸಿದರು. ಈಶ್ವರ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಕಿಣಿ ಧನ್ಯವಾದ ಸಮರ್ಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು.