ಸಿದ್ದಾಪುರ| ವಿವಾಹಿತೆಯ ಜೊತೆ ಜ್ಯೋತಿಷಿ ಅಕ್ರಮ ಸಂಬಂಧ ಆರೋಪ: ಪ್ರಶ್ನಿಸಿದ್ದಕ್ಕೆ ತಂಡದಿಂದ ಹಲ್ಲೆ; ಓರ್ವ ಮೃತ್ಯು
ಜ್ಯೋತಿಷಿ ಕಮಲಾಕರ ಭಟ್ ಸಹಿತ ಏಳು ಮಂದಿ ಆರೋಪಿಗಳ ಬಂಧನ
ಸಿದ್ದಾಪುರ: ವಿವಾಹಿತ ಮಹಿಳೆಯ ಜೊತೆ ಜ್ಯೋತಿಷಿಯೊಬ್ಬರು ಅಕ್ರಮ ಸಂಬಂಧ ಹೊಂದಿರುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಕೊಲೆಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ವಸಂತ (43) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿ ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ, ಸುಚಿತ್ರಾಳ ತಂದೆ ಲೋಕನಾಥ್ ಎಂಬವರು ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಯಿಂದ ಸುಚಿತ್ರಾಳ ಪತಿ ಮಹೇಶ್ ಮತ್ತು ನೆರೆಮನೆಯ ಕುಮಾರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಸಿದ್ದಾಪುರದ ಮಹೇಶ್ ಮತ್ತು ಸುಚಿತ್ರಾ ದಂಪತಿಗೆ ಇಬ್ಬರು ಹೆಣ್ಮಕ್ಕಳಿದ್ದು, ಮಹೇಶ್ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿದ್ದರು. ಕಳೆದ ಆರು ತಿಂಗಳಿನಿಂದ ಮಹೇಶ್ ಮತ್ತು ಸುಚಿತ್ರಾ ಪ್ರತ್ಯೇಕವಾಗಿದ್ದರೆನ್ನಲಾಗಿದೆ. ಈ ಮಧ್ಯೆ ಸುಚಿತ್ರಾಳಿಗೆ ಶಿವಮೊಗ್ಗ ಮೂಲದ ಜ್ಯೋತಿಷಿ ಕಮಲಾಕರ್ ಭಟ್ ಎಂಬಾತನ ಜೊತೆ ಅಕ್ರಮ ಸಂಬಂಧ ಬೆಳದಿದ್ದು, ಮಕ್ಕಳನ್ನೂ ಕರೆದುಕೊಂಡು ಶಿವಮೊಗ್ಗಕ್ಕೆ ತೆರಳಿ ಆತನೊಂದಿಗೆ ವಾಸಿಸುತ್ತಿದ್ದಳು ಎಂದು ತಿಳಿದುಬಂದಿದೆ. ಈ ಮಧ್ಯೆ ತಾಯಿ ಸುಚಿತ್ರಾ ಮತ್ತು ಕಮಲಾಕರ ಸ್ವಾಮಿ ತನಗೆ ಕಿರುಕುಳ ನೀಡುತ್ತಿರುವುದಾಗಿ ಮಗಳು ಸುಮಶ್ರೀ ತನ್ನ ತಂದೆ ಮಹೇಶ್ ಗೆ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿದ ಮಹೇಶ್ ಮಗಳನ್ನು ಸಿದ್ದಾಪುರಕ್ಕೆ ಕರೆಸಿಕೊಂಡಿದ್ದಾರೆ.
ಮಗಳನ್ನು ಮಹೇಶ್ ಕರೆದೊಯ್ದಿರುವುದರಿಂದ ಸುಚಿತ್ರಾ ಮನೆಯವರು ಕೋಪಗೊಂಡಿದ್ದರು. ಸೋಮವಾರ ರಾತ್ರಿ ಮಹೇಶ್ ತನ್ನ ಅಣ್ಣ ವಸಂತನ ಮನೆಯಲ್ಲಿದ್ದ ವೇಳೆ ಸುಚಿತ್ರಾ ತನ್ನ ತಂದೆ ಲೋಕನಾಥ್ ಹಾಗೂ ಇನ್ನೂ ನಾಲ್ವರೊಂದಿಗೆ ಅಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ ಜಗಳ ನಡೆದಿದ್ದು, ಸುಚಿತ್ರಾ ಮತ್ತು ಆಕೆಯ ತಂಡ ಮಹೇಶ್ ಅವರ ಅಣ್ಣ ವಸಂತ್ ರಿಗೆ ಚಾಕುವಿನಿಂದ ಇರಿದಿದೆ. ಪರಿಣಾಮ ವಸಂತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಮಹೇಶ್ ಮತ್ತು ನೆರೆಮನೆಯ ಕುಮಾರ್ ಎಂಬವರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸುಚಿತ್ರಾ, ಆಕೆಯ ತಂದೆ ಲೋಕನಾಥ ನಾಯ್ಕ್, ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಒಟ್ಟು ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.