×
Ad

ಭಟ್ಕಳವನ್ನು ಜಗತ್ತಿಗೆ ಪರಿಚಯಿಸಿದ್ದು ಸೈಯ್ಯದ್ ಖಲೀಲ್: ಸಚಿವ ಮಂಕಾಳ್ ವೈದ್ಯ

Update: 2025-07-24 22:31 IST

ಭಟ್ಕಳ: “ಐವತ್ತು ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ಇಂಜಿನಿಯರಿಂಗ್ ಶಿಕ್ಷಣವನ್ನು ಪರಿಚಯಿಸಿ ಭಟ್ಕಳವನ್ನು ಜಗತ್ತಿಗೆ ಕೊಂಡೊಯ್ದ ವ್ಯಕ್ತಿತ್ವ ದಿವಂಗತ ಎಸ್.ಎಂ. ಸೈಯ್ಯದ್ ಖಲೀಲ್ ಸಾಹೇಬರದ್ದು,” ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ್ ವೈದ್ಯ ಹೇಳಿದರು.

ಗುರುವಾರ ಸಂಜೆ ಇಲ್ಲಿನ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ರಾಬಿತಾ ಸೊಸೈಟಿಯಿಂದ ಆಯೋಜಿತವಾದ ‘ರಾಬಿತಾ ಶೈಕ್ಷಣಿಕ ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ‘ಪ್ರೈಡ್ ಆಫ್ ಕಮ್ಯುನಿಟಿ-ಡಾ. ಎಸ್.ಎಂ. ಸೈಯ್ಯದ್ ಖಲೀಲುರ್ರಹ್ಮಾನ್’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

“ರಾಬಿತಾ ಸಂಸ್ಥೆ ಶಿಕ್ಷಣ, ಆರೋಗ್ಯ, ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ. ದಿವಂಗತ ಎಸ್.ಎಂ. ಯಾಹ್ಯಾ ಅವರ ಕನಸಾದ ಭಟ್ಕಳದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯ ಕಾಲ ಈಗ ಕೂಡಿಬಂದಿದೆ. ಇದಕ್ಕೆ ನಾನು ಎಲ್ಲ ರೀತಿಯ ಸಹಕಾರ ನೀಡುವೆ,” ಎಂದು ಸಚಿವರು ಭರವಸೆ ನೀಡಿದರು.ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವುದನ್ನು ಒಪ್ಪಿಕೊಂಡ ಅವರು, “ಕಳೆದ ಎರಡು ವರ್ಷಗಳಲ್ಲಿ ಯೋಜನೆಗಳ ಪ್ರಗತಿ ಕಡಿಮೆಯಾಗಿತ್ತು. ಆದರೆ, ಈಗ ಸರ್ಕಾರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಭಟ್ಕಳದಲ್ಲಿ ಯೋಜನೆಗಳು ಚುರುಕುಗೊಳ್ಳಲಿವೆ,” ಎಂದರು.

ಸಮಾರಂಭದಲ್ಲಿ ರಾಬಿತಾ ಸೊಸೈಟಿಯ ‘ಬೆಸ್ಟ್ ಸ್ಕೂಲ್ ಆಫ್ ಭಟ್ಕಳ’ ರೋಲಿಂಗ್ ಶೀಲ್ಡ್‌ನ್ನು ಅಲಿ ಪಬ್ಲಿಕ್ ಗರ್ಲ್ಸ್ ಕಾಲೇಜು ಪಡೆದುಕೊಂಡಿತು. ಎಸ್.ಎಂ. ಸೈಯ್ಯದ್ ಖಲೀಲ್ ಸ್ಮರಣಾರ್ಥ ‘ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ನೌನಿಹಾಲ್ ಸೆಂಟ್ರಲ್ ಸ್ಕೂಲ್‌ನ ಶಿಕ್ಷಕಿ ಫಾತಿಮಾ ವೇದಾ ಸಿದ್ದೀಖಿ ಪಡೆದರು.

ಬೆಳಿಗ್ಗೆ 10 ರಿಂದ ಮಧ್ಯಾಹ್ನ 12:30 ಮತ್ತು ಸಂಜೆ 4:45 ರಿಂದ ರಾತ್ರಿ 7 ರವರೆಗೆ ಎರಡು ಸೆಷನ್‌ಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಟ್ಕಳ ಮತ್ತು ಸುತ್ತಮುತ್ತಲ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಸ್ಮರಣಿಕೆ, ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.

ರಾಬಿತಾ ಸೊಸೈಟಿ ಅಧ್ಯಕ್ಷ ಉಮರ್ ಫಾರೂಖ್ ಮುಸ್ಬಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅತಿಕುರ್ರಹ್ಮಾನ್ ಮುನೀರಿ ಸಂಸ್ಥೆಯ ವರದಿ ಮಂಡಿಸಿದರು. ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ಧರ್ಮಶಾಸ್ತ್ರ ವಿಭಾಗದ ಮಾಜಿ ಡೀನ್ ಪ್ರೊ. ಡಾ. ಎಂ. ಸೌದ್ ಆಲಂ ಕಾಸ್ಮಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವೇದಿಕೆಯಲ್ಲಿ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಯೂನೂಸ್ ಕಾಝಿಯಾ, ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಆಫ್ತಾಬ್ ಹುಸೇನ್ ಕೋಲಾ, ಭಟ್ಕಳ ಪುರಸಭೆ ಅಧ್ಯಕ್ಷ ಅಲ್ತಾಫ್ ಖರೂರಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.







Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News