×
Ad

ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು: ತುರ್ತು ಸುರಕ್ಷತಾ ಕ್ರಮಕ್ಕೆ ನಾಗರಿಕರ ಮನವಿ

Update: 2025-08-24 23:27 IST

ಭಟ್ಕಳ: ಭಟ್ಕಳ ಪಟ್ಟಣದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಪ್ರಮಾಣ ದಿನೇದಿನೇ ಹೆಚ್ಚುತ್ತಿರುವುದು ಸ್ಥಳೀಯರಲ್ಲಿ ಗಂಭೀರ ಕಳವಳಕ್ಕೆ ಕಾರಣವಾಗಿದೆ. ಪ್ರತೀ ವಾರವೂ ಅಪಘಾತಕ್ಕೆ ಜನರು ಹಾಗೂ ಪ್ರಾಣಿಗಳು ಬಲಿಯಾಗುತ್ತಿದ್ದರೂ, ಆಡಳಿತ ಮತ್ತು ಜನಪ್ರತಿನಿಧಿಗಳು ಸಮರ್ಪಕ ಕ್ರಮ ಕೈಗೊಳ್ಳದಿರುವುದಕ್ಕೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಬೆಳಿಗ್ಗೆ ನೂರು ಮಸೀದಿಯ ಮುಂದೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂತಹ ಘಟನೆಗಳು ಪದೇಪದೇ ನಡೆಯುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ಟ್ರಾಫಿಕ್ ಪೊಲೀಸರ ಕೊರತೆ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಭಟ್ಕಳ ಪಟ್ಟಣದ ಮೂಲಕ ಹಾದು ಹೋಗುವ ಹೆದ್ದಾರಿಯ ಉದ್ದಕ್ಕೂ ನಿರಂತರ ಟ್ರಾಫಿಕ್ ಪೊಲೀಸರ ನಿಯೋಜನೆ ಇಲ್ಲದಿರುವುದು ವಾಹನ ಸವಾರರ ಅಜಾಗರೂಕ ಚಾಲನೆಗೆ ಕಾರಣವಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳ ಪ್ರಮಾಣ ನಿರಂತರ ಏರಿಕೆಯಾಗುತ್ತಿದೆ.

ಬೈಪಾಸ್‌ನ ಬಿಎಸ್ಎನ್ಎಲ್ ಕಚೇರಿಯ ಬಳಿಯ ಕಡಿದಾದ ಇಳಿಜಾರು ವಾಹನ ಸವಾರರಿಗೆ ಅತ್ಯಂತ ಅಪಾಯ ಕಾರಿಯಾಗಿ ಮಾರ್ಪಟ್ಟಿದೆ. ಈ ಸ್ಥಳದಲ್ಲಿ ವಾಹನಗಳು ನಿಯಂತ್ರಣ ಕಳೆದುಕೊಂಡು ಅಪಘಾತಗಳಾಗುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇವುಗಳಲ್ಲದೇ ಪಟ್ಟಣದ ಹಲವು ಸ್ಥಳಗಳು ಅಪಘಾತ ವಲಯಗಳಾಗಿ ಮಾರ್ಪಟ್ಟಿದೆ. ಪಟ್ಟಣದ ಸರ್ಕ್ಯೂಟ್ ಹೌಸ್ ಬಳಿ, ಹಳೆಯ ಪಟ್ಟಣದಿಂದ ಆಸ್ಪತ್ರೆ ರಸ್ತೆ ಹಾಗೂ ಅಂಜುಮನ್ ಕಾಲೇಜು ರಸ್ತೆ ಕಡೆಗೆ ಚಲಿಸುವ ವಾಹನಗಳು ಭಾರೀ ಟ್ರಕ್‌ಗಳಿಗೆ ಡಿಕ್ಕಿ ಹೊಡೆಯುವ ಅಪಾಯವಿದೆ. ರವಿವಾರದಂದು ಮಾರುಕಟ್ಟೆಯ ಕಡೆಗೆ ವಾಹನಗಳ ದಟ್ಟಣೆಯಿಂದಾಗಿ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುತ್ತದೆ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಶಂಸುದ್ದೀನ್ ವೃತ್ತ, ರಂಗೀನ್ ಕಟ್ಟೆ ಹಾಗೂ ಇತರ ಜನನಿಬಿಡ ಜಂಕ್ಷನ್‌ಗಳಲ್ಲಿಯೂ ಪಾದಚಾರಿಗಳು ಹಾಗೂ ವಾಹನ ಸವಾರರು ಅಪಘಾತಗಳಿಗೆ ತುತುತ್ತಾಗಿ ಜೀವ ಕಳೆದುಕೊಳ್ಳುವ ಭೀತಿ ನಿರ್ಮಾಣ ವಾಗಿದೆ. ವಿಶೇಷವಾಗಿ ಬಿಎಸ್ಎನ್ಎಲ್ ಇಳಿಜಾರಿನ ಬಳಿ ಪಾದಚಾರಿಗಳಿಗೆ ಸುರಕ್ಷಿತವಾಗಿ ದಾಟಲು ಅಥವಾ ವಾಹನ ಏರಲು ಸೂಕ್ತ ಸೌಲಭ್ಯಗಳ ಕೊರತೆಯಿದೆ.

ತುರ್ತು ಸುರಕ್ಷತಾ ಕ್ರಮಕ್ಕೆ ಆಗ್ರಹ

ಅಪಘಾತಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಈ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅವರ ಪ್ರಮುಖ ಬೇಡಿಕೆಗಳು ಹೀಗಿವೆ:

*ಅಪಘಾತ ಪೀಡಿತ ಪ್ರದೇಶಗಳಲ್ಲಿ ನಿರಂತರ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ನಿಯೋಜನೆ

*ಹೆದ್ದಾರಿಯಲ್ಲಿ ವೇಗ ನಿಯಂತ್ರಣಕ್ಕಾಗಿ ಬ್ಯಾರಿಕೇಡ್‌ಗಳ ಅಳವಡಿಕೆ

*ಅಪಾಯಕಾರಿ ವಲಯಗಳಲ್ಲಿ ಹಾಗೂ ಬ್ಯಾರಿಕೇಡ್‌ ಗಳ ಬಳಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ

“ಈ ಸಮಸ್ಯೆಯ ನಿರ್ವಹಣೆಯಲ್ಲಿನ ಸಣ್ಣ ಲೋಪವೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಧ್ವನಿ ಎತ್ತಿ ಆಡಳಿತ ಹಾಗೂ ಜನ ಪ್ರತಿನಿಧಿಗಳತ್ತ ಒತ್ತಡ ಹೇರುವ ಅಗತ್ಯವಿದೆ" ಎಂದು ಜನರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News