ಎಸ್‌ಟಿ ಪಟ್ಟಿಗೆ ಕುರುಬ ಸಮಾಜ ಸೇರ್ಪಡೆ ಯತ್ನ ಆರೋಪ: ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಬಹಿಷ್ಕಾರ
ವಿಜಯನಗರ/ಹೊಸಪೇಟೆ: ರಾಜ್ಯ ಸರಕಾರ ಎಸ್‌ಟಿ ಪಟ್ಟಿಗೆ ಕುರುಬ ಸಮಾಜವನ್ನು ಸೇರ್ಪಡೆ ಮಾಡಲು ಮುಂದಾಗಿರುವ ಕ್ರಮವನ್ನು ಖಂಡಿಸಿ, ವಾಲ್ಮೀಕಿ ನಾಯಕ ಸಮಾಜದ ಬಂಧುಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೆೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿದ ಘಟನೆ ಜರಗಿತು.
ಅ.೭ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅಧ್ಯಕ್ಷತೆಯಲ್ಲಿ ಜಯಂತಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಯ ಆರಂಭದಲ್ಲಿಯೇ ಮಾತನಾಡಿದ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ, ದಾವಣಗೆರೆಯ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಗುರುವಾರ ಡಾ.ಪ್ರಸನ್ನಾನಂದಪುರಿ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜರಗಿದ ರಾಜ್ಯ ಮಟ್ಟದ ವಾಲ್ಮೀಕಿ ಸಮಾಜದ ಸಭೆಯಲ್ಲಿ ಸರಕಾರ ಎಸ್‌ಟಿ ಪಟ್ಟಿಯಲ್ಲಿ ಕುರುಬ ಸೇರಿದಂತೆ ಇತರ ಸಮಾಜಗಳನ್ನು ಸೇರ್ಪಡೆ ಮಾಡಲು ಮುಂದಾಗಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯ ಮಟ್ಟದ ಸಭೆಯ ತೀರ್ಮಾನದಂತೆ ಸೆ.೨೫ರಂದು ರಾಜ್ಯಾದ್ಯಂತ ವಾಲ್ಮೀಕಿ ಸಮಾಜ ಪ್ರತಿಭಟನೆ ನಡೆಸಿ, ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ನಮ್ಮ ಮನವಿಗೆ ಸ್ಪಂದಿಸಿ ಸರಕಾರ ಎಸ್‌ಟಿ ಪಟ್ಟಿಗೆ ವಾಲ್ಮೀಕಿ ಸಮಾಜವನ್ನು ಸೇರ್ಪಡೆ ಮಾಡುವ ಪ್ರಯತ್ನದಿಂದ ಹಿಂದೆ ಸರಿಯಬೇಕು. ಈ ಬಗ್ಗೆ ಸರಕಾರದ ನಡೆಯನ್ನು ಗಮನಿಸಿಕೊಂಡು ಆಚರಿಸಲಾಗುವ ವಾಲ್ಮೀಕಿ ಜಯಂತಿಯಲ್ಲಿ ಸಮಾಜ ಭಾಗವಹಿಸಬೇಕೋ, ಬೇಡವೋ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಸಭೆಯನ್ನು ಬಹಿಷ್ಕರಿಸಿ, ಸಭೆಯಿಂದ ಹೊರ ನಡೆದರು.
ಈ ಸಂದರ್ಭಲ್ಲಿ ತಾಲೂಕು ವಾಲ್ಮೀಕಿ ಸಮಾಜದ ಪ್ರಧಾನ ಕಾರ್ಯದರ್ಶಿ ದೇವರಮನಿ ಶ್ರೀನಿವಾಸ, ಮುಖಂಡರಾದ ಡಾ.ಪನ್ನಂಗಧರ್, ಕಿಶೋರ್ ಕುಮಾರ್, ಕಿಚಿಡಿ ಶ್ರೀನಿವಾಸ, ದುರುಗಪ್ಪ ಪೂಜಾರಿ, ಗುಜ್ಜಲ ಚಂದ್ರಶೇಖರ್, ಬಿಸಾಟಿ ತಾಯಪ್ಪ ನಾಯಕ, ಬಂಡೆ ಶ್ರೀನಿವಾಸ, ಎಸ್.ಎಸ್.ಚಂದ್ರಶೇಖರ್, ಗುಜ್ಜಲ ಶ್ರೀನಾಥ, ಕಣ್ಣಿ ಶ್ರೀಕಂಠ, ಜಂಬಾನಳ್ಳಿ ವಸಂತ, ಜಂಬಾನಳ್ಳಿ ಸತ್ಯನಾರಾಯಣ, ಕಟಿಗಿ ರಾಮಕೃಷ್ಣ, ನಾಣಿಕೇರಿ ವೆಂಕೋಬ ಮತ್ತಿತರರು ಹಾಜರಿದ್ದರು.