ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಹಕರಿಸಿ : ಶಾಸಕ ಹೆಚ್.ಆರ್.ಗವಿಯಪ್ಪ
ವಿಜಯನಗರ (ಹೊಸಪೇಟೆ): ರಾಜ್ಯಾದ್ಯಂತ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಗಣತಿದಾರರಿಗೆ ಕುಟುಂಬಸ್ಥರು ವಾಸ್ತವ ಮಾಹಿತಿಯನ್ನು ನೀಡಬೇಕು ಎಂದು ಹೊಸಪೇಟೆ ಶಾಸಕ ಹೆಚ್.ಆರ್. ಗವಿಯಪ್ಪ ಕರೆ ನೀಡಿದರು.
ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಸಮೀಕ್ಷೆಯ ಸಮಗ್ರ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
“ಪ್ರತಿಯೊಂದು ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಆಧರಿಸಿ ಸಮೀಕ್ಷೆ ನಡೆಯಲಿದೆ. ತಂತ್ರಜ್ಞಾನದ ಬಳಕೆಯಿಂದ ಮೊಬೈಲ್ ಮೂಲಕ ಸಮೀಕ್ಷಾದಾರರು ಮನೆ ಮನೆಗೆ ಭೇಟಿ ನೀಡುವರು. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನು ತೋರಿಸಿ, ಯಾವುದೇ ತಪ್ಪುಗ್ರಹಿಕೆ ಇಲ್ಲದೆ ನಿಖರ ಮಾಹಿತಿಯನ್ನು ನೀಡಬೇಕು. ಇದರಿಂದ ಸರ್ಕಾರವು ನಿಮ್ಮ ಸ್ಥಿತಿಗತಿಗಳನ್ನು ತಿಳಿದು, ಮುಂದಿನ ಯೋಜನೆಗಳಲ್ಲಿ ಫಲಾನುಭವಿಗಳಾಗಲು ಸಹಾಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜೆ.ಎಂ. ಅನ್ನದಾನಸ್ವಾಮಿ ಮಾತನಾಡಿ, ಸೆ.22ರಿಂದ ಅ.7ರವರೆಗೆ 18 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
10 ವರ್ಷಗಳ ಹಿಂದೆ ಸಮೀಕ್ಷೆ ನಡೆದಿತ್ತು. ಈಗಿನ ಪರಿಸ್ಥಿತಿಗಳನ್ನು ಅರಿಯಲು ಈ ಸಮೀಕ್ಷೆ ಅತ್ಯಂತ ಅಗತ್ಯ. ಪ್ರತಿಯೊಬ್ಬ ಸಮೀಕ್ಷಾಧಿಕಾರಿಗೆ ಕನಿಷ್ಠ 150 ಮನೆಗಳ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ. ಸುಮಾರು 3.30 ಲಕ್ಷ ಕುಟುಂಬಗಳ ಮಾಹಿತಿ ಸಂಗ್ರಹಿಸಲಾಗುವುದು. ಜೆಸ್ಕಾಂ ಆರ್‌ಆರ್ ಸಂಖ್ಯೆಯನ್ನು ಆಧರಿಸಿ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲಾಗಿದೆ. ಸ್ಥಳೀಯ ಪ್ರಾಥಮಿಕ ಶಾಲಾ ಶಿಕ್ಷಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹೊಸಪೇಟೆ ಸಹಾಯಕ ಆಯುಕ್ತ ಪಿ.ವಿವೇಕಾನಂದ, ನಗರಸಭೆ ಆಯುಕ್ತ ಶಿವಕುಮಾರ್ ಯರ್ರಗುಡಿ, ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲಂಪಾಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ. ಶಶಿಕಲಾ ಹಾಗೂ ತಹಶೀಲ್ದಾರ ಎಂ.ಶೃತಿ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ 500ಕ್ಕೂ ಹೆಚ್ಚು ಜನ ಸ್ಥಳೀಯರು ಭಾಗವಹಿಸಿದ್ದರು.