×
Ad

ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಭೂ ಮಾಲಕತ್ವ ಸಿಗಲೇಬೇಕು : ರಾಹುಲ್ ಗಾಂಧಿ

Update: 2025-05-20 19:41 IST

ರಾಹುಲ್ ಗಾಂಧಿ

ಹೊಸಪೇಟೆ : ರಾಜ್ಯದಲ್ಲಿ ಭೂಮಿ ಹೊಂದಿರುವ ಬಡವರು, ಹಿಂದುಳಿದ ವರ್ಗದವರು, ಆದಿವಾಸಿಗಳು, ದಲಿತರು ಯಾವುದೇ ಕಾರಣಕ್ಕೂ ಅದರ ಮಾಲಕತ್ವದಿಂದ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶ. ಆದುದರಿಂದಲೇ, ಇಂದು ಸುಮಾರು ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಅವರ ಭೂಮಿಯ ಮಾಲಕತ್ವದ ಹಕ್ಕನ್ನು ರಾಜ್ಯ ಕಾಂಗ್ರೆಸ್ ಸರಕಾರ ನೀಡುತ್ತಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು.

ಮಂಗಳವಾರ ರಾಜ್ಯ ಸರಕಾರವು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಸರಕಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಸಮರ್ಪಣೆ ಸಂಕಲ್ಪ’ ಸಮಾವೇಶದಲ್ಲಿ 1,11,111 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವು ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳು ಸೇರಿದಂತೆ ಹಲವು ಆಶ್ವಾಸನೆಗಳನ್ನು ರಾಜ್ಯದ ಜನತೆಗೆ ನೀಡಿದ್ದೆವು. ಬಿಜೆಪಿಯವರು ಕಾಂಗ್ರೆಸ್ ಪಕ್ಷ ಕೊಟ್ಟಿರುವ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು. ಸ್ವತಃ ಪ್ರಧಾನಿ ಮೋದಿಯೂ ಇದೇ ಮಾತನ್ನು ಉಲ್ಲೇಖಿಸಿದ್ದರು. ಆದರೆ, ನಮ್ಮ ಕಾಂಗ್ರೆಸ್ ಸರಕಾರವು ಎಲ್ಲ ಐದು ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಗೃಹ ಲಕ್ಷ್ಮಿ’ ಗ್ಯಾರಂಟಿ ಅಡಿ ಮಾಸಿಕ ಎರಡು ಸಾವಿರ ರೂ.ಗಳನ್ನು ಪ್ರತಿಯೊಂದು ಕುಟುಂಬದ ಯಜಮಾನಿಗೆ ನೀಡಲಾಗುತ್ತಿದೆ. ಅದರಡಿಯಲ್ಲಿ ಸುಮಾರು ಒಂದು ಕೋಟಿ ಮಹಿಳೆಯರ ಖಾತೆಗಳಿಗೆ ಸಾವಿರಾರು ಕೋಟಿ ರೂ.ಗಳು ನೇರವಾಗಿ ತಲುಪಿಸಲಾಗುತ್ತಿದೆ. ‘ಗೃಹ ಜ್ಯೋತಿ’ ಗ್ಯಾರಂಟಿ ಅಡಿ ಪ್ರತಿಯೊಂದು ಕುಟುಂಬಕ್ಕೆ 200 ಯೂನಿಟ್‍ವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ‘ಅನ್ನಭಾಗ್ಯ’ ಗ್ಯಾರಂಟಿ ಅಡಿ ಸುಮಾರು 4 ಕೋಟಿ ಕುಟುಂಬಗಳ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿಯನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

‘ಶಕ್ತಿ’ ಗ್ಯಾರಂಟಿ ಅಡಿ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ಈವರೆಗೆ ಸುಮಾರು 500 ಕೋಟಿ ಬಸ್ ಪ್ರಯಾಣಗಳನ್ನು ಮಹಿಳೆಯರು ಪೂರೈಸಿದ್ದಾರೆ. ‘ಯುವ ನಿಧಿ’ ಗ್ಯಾರಂಟಿ ಅಡಿ 3 ಲಕ್ಷ ಯುವಕರಿಗೆ ಮಾಸಿಕ 3 ಸಾವಿರ ರೂ.ಗಳನ್ನು ನೀಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಕರ್ನಾಟಕದ ಬಡವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದೆವು. ಅದರಂತೆ, ಸಾವಿರಾರು ಕೋಟಿ ರೂ. ನೇರವಾಗಿ ನಿಮ್ಮ ಖಾತೆಗಳಿಗೆ ಹೋಗುತ್ತಿದ್ದೆ. ಈ ಹಣವನ್ನು ನಿಮ್ಮ ಮಕ್ಕಳಿಗೆ ಶಿಕ್ಷಣ, ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದ್ದೀರಾ. ನಿಮ್ಮ ಹಣ ವಾಪಸ್ ನಿಮ್ಮ ಜೇಬಿಗೆ ಹೋಗಬೇಕು ಎಂಬುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.

ಬಿಜೆಪಿಯವರ ಉದ್ದೇಶ ಈ ದೇಶದ ಕೆಲವು ಕುಟುಂಬಗಳಿಗೆ ಮಾತ್ರ ದೇಶದ ಸಂಪನ್ಮೂಲ ಹಂಚಿಕೆಯಾಗಬೇಕು. ಆದರೆ, ನಾವು ಕರ್ನಾಟಕದ ಬಡ ಕುಟುಂಬಗಳು, ಹಿಂದುಳಿದವರು, ದಲಿತರು, ಆದಿವಾಸಿಗಳ ಕೈಗೆ ಹಣ ಹೋಗಬೇಕು ಎಂಬುದು ನಮ್ಮ ಉದ್ದೇಶ. ನಾವು ನಿಮಗೆ ನೀಡುವ ಹಣ ಪುನಃ ಮಾರುಕಟ್ಟೆಗಳಿಗೆ ಹೋಗುತ್ತದೆ. ಇದರಿಂದ ಉತ್ಪಾದನೆ ಹೆಚ್ಚಾಗುತ್ತದೆ. ಪ್ರತಿಯೊಂದು ಗ್ರಾಮಗಳಲ್ಲಿಯೂ ಹಣದ ವಹಿವಾಟು ಆರಂಭವಾಗುತ್ತದೆ. ರಾಜ್ಯದ ಆರ್ಥಿಕ ವ್ಯವಸ್ಥೆ ಬಲಗೊಳ್ಳುತ್ತದೆ ಎಂದು ಅವರು ವಿಶ್ಲೇಷಿಸಿದರು.

ಬಿಜೆಪಿಯವರು ಎರಡು ಮೂರು ಆಗರ್ಭ ಶ್ರೀಮಂತರ ಕೈಗೆ ಎಲ್ಲಾ ಹಣವನ್ನು ಕೊಡಲು ಬಯಸುತ್ತಾರೆ. ಈ ಆಗರ್ಭ ಶ್ರೀಮಂತರು ಆ ಹಣವನ್ನು ಗ್ರಾಮಗಳಲ್ಲಿ ಖರ್ಚು ಮಾಡುವುದಿಲ್ಲ. ಲಂಡನ್, ನ್ಯೂಯಾರ್ಕ್ ಸೇರಿದಂತೆ ಇನ್ನಿತರ ವಿದೇಶಗಳಲ್ಲಿ ಆಸ್ತಿಗಳನ್ನು ಖರೀದಿ ಮಾಡಲು ಖರ್ಚು ಮಾಡುತ್ತಾರೆ. ಬಿಜೆಪಿಯವರ ಮಾದರಿಯಲ್ಲಿ ಉದ್ಯೋಗ ನಷ್ಟವಾಗುತ್ತದೆ. ನಮ್ಮ ಮಾದರಿಯಲ್ಲಿ ಉದ್ಯೋಗ ಸೃಷ್ಟಿಯಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

ಬಿಜೆಪಿಯವರ ಮಾದರಿಯಲ್ಲಿ ನಿಮ್ಮ ಆರೋಗ್ಯ ಕೆಟ್ಟರೆ ನೀವು ಸಾಲದ ಸುಳಿಗೆ ಸಿಲುಕಬೇಕು. ನಮ್ಮ ಮಾದರಿಯಲ್ಲಿ ನೀವು ಅನಾರೋಗ್ಯಕ್ಕೆ ಒಳಗಾದರೆ ನಿಮ್ಮ ಆರೈಕೆಗಾಗಿ ನಿಮ್ಮ ಜೇಬಿನಲ್ಲಿ ಹಣ ಇರುತ್ತದೆ. ಅವರ ಮಾದರಿಯಲ್ಲಿ ಲಕ್ಷಾಂತರ, ಕೋಟ್ಯಂತರ ರೂ.ಗಳನ್ನು ನೀವು ಖಾಸಗಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ನೀಡಬೇಕು. ನಮ್ಮ ಮಾದರಿಯಲ್ಲಿ ನಿಮ್ಮ ನೆರವಿಗೆ ಹಣ ನೀಡಲಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಐದು ಗ್ಯಾರಂಟಿಗಳ ಕುರಿತು ಚರ್ಚೆ ನಡೆಯುವಾಗ ರಾಜ್ಯದಲ್ಲಿ ಭೂ ಮಾಲಕತ್ವವಿಲ್ಲದ ಲಕ್ಷಾಂತರ ಕುಟುಂಬಗಳು ಇವೆ. ಅವರು ವಾಸಿಸುವ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿಗಣಿಸದೆ ಇರುವುದರಿಂದ ಅವರಿಗೆ ಯಾವುದೇ ಹಕ್ಕುಗಳು, ಸರಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ವಿಷಯ ನನ್ನ ಗಮನಕ್ಕೆ ಬಂತು. ಹಲವಾರು ವರ್ಷಗಳಿಂದ ಆ ಕುಟುಂಬಗಳು ಆ ಜಮೀನಿನ ಅನುಭೋಗದಲ್ಲಿದ್ದರೂ ಅವರಿಗೆ ಆ ಜಮೀನಿನ ಮೇಲೆ ಹಕ್ಕು ಇರಲಿಲ್ಲ. ಇದರಲ್ಲಿ ಎಲ್ಲ ಜಾತಿ, ಧರ್ಮದವರು ಇದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಈ ಬಗ್ಗೆ ನಾನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರರ ಜೊತೆ ಚರ್ಚಿಸಿ, ಕರ್ನಾಟಕದಲ್ಲಿ ಜಮೀನು ಹೊಂದಿರುವ ಎಲ್ಲರಿಗೂ ಅದರ ಮಾಲಕತ್ವದ ಹಕ್ಕು ಸಿಗಲೇಬೇಕು. ಈ ಬಗ್ಗೆ ಯೋಜನೆ ರೂಪಿಸುವಂತೆ ತಿಳಿಸಿದ್ದೆ. ಇಂದು ಅತ್ಯಂತ ಸಂತೋಷದಿಂದ ತಮ್ಮ ಹಕ್ಕುಗಳಿಂದ ವಂಚಿರಾಗಿದ್ದ ಆ ಕುಟುಂಬಗಳಿಗೆ ಭೂ ಮಾಲಕತ್ವದ ಹಕ್ಕು ನೀಡುವ ಆರನೇ ಗ್ಯಾರಂಟಿಯನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ರಾಜ್ಯದ ಒಂದು ಲಕ್ಷ ಕುಟುಂಬಗಳಿಗೆ ರಾಜ್ಯ ಸರಕಾರ ಇಂದು ಮಾಲಕತ್ವದ ಹಕ್ಕು ನೀಡುತ್ತಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಕನಸನ್ನು ಪೂರ್ಣಗೊಳಿಸುವಲ್ಲಿ ನಾವು ದೊಡ್ಡ ಹೆಜ್ಜೆಯನ್ನು ಇಟ್ಟಿದ್ದೇವೆ. 2,000 ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುತ್ತಿದೇವೆ. ಬಡವರ ಬಳಿ ಭೌತಿಕವಾಗಿ ದಾಖಲಾತಿಯ ಪ್ರತಿ ಇದ್ದರೂ ಅವರಿಗೆ ಬೇಕಾದಾಗ ಅದನ್ನು ಪಡೆಯಲು ಅನುಕೂಲವಾಗುವಂತೆ ಡಿಜಿಟಲ್ ನೋಂದಣಿ ಮಾಡುವಂತೆ ತಿಳಿಸಿದ್ದೇನೆ ಎಂದು ಅವರು ಹೇಳಿದರು.

ಇನ್ನೂ ಸುಮಾರು 50 ಸಾವಿರ ಕುಟುಂಬಗಳ ಬಳಿ ದಾಖಲೆಗಳು ಇಲ್ಲ. ಆರು ತಿಂಗಳಲ್ಲಿ ಆ 50 ಸಾವಿರ ಕುಟುಂಬಗಳಿಗೂ ಹಕ್ಕುಪತ್ರಗಳನ್ನು ನೀಡಬೇಕು. 2,000 ಕಂದಾಯ ಗ್ರಾಮಗಳನ್ನು ಇಂದು ಘೋಷಣೆ ಮಾಡಿದ್ದೇವೆ. ಹೊಸದಾಗಿ 500 ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಬೇಕು. ಕರ್ನಾಟಕದಲ್ಲಿ ಜಮೀನಿನ ಮಾಲಕತ್ವದಿಂದ ಒಬ್ಬರೂ ವಂಚಿತರಾಗಬಾರದು. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಗಳು ಪ್ರತಿಯೊಂದು ಕುಟುಂಬಗಳನ್ನು ಭೇಟಿ ಮಾಡಿ ಅವರಿಗೆ ಹಕ್ಕು ಪತ್ರಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ರಾಹುಲ್ ಗಾಂಧಿ ಸೂಚಿಸಿದರು.

ಪ್ರತಿಯೊಬ್ಬ ನಾಗರಿಕನೂ ತನ್ನ ಭೂಮಿಯ ಮಾಲಕತ್ವವನ್ನು ಪಡೆದಿರುವ ದೇಶದ ಮೊಟ್ಟ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಬೇಕು. ನಾವು ಐದು ಗ್ಯಾರಂಟಿಯ ಆಶ್ವಾಸನೆ ನೀಡಿದ್ದೇವು. ಆದರೆ, ವಾಸ್ತವವಾಗಿ ಆರು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಇದು ಕರ್ನಾಟಕದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಇದರಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News