×
Ad

ಹರಪನಹಳ್ಳಿ | ವಿಬಿ–ಜಿ ರಾಮ್‌ಜಿ’ ಮಸೂದೆ ವಾಪಸ್‌ ಪಡೆಯಲು ಸಿಪಿಐನಿಂದ ಪ್ರತಿಭಟನೆ

Update: 2025-12-30 22:20 IST

ಹರಪನಹಳ್ಳಿ: ‘ವಿಬಿ–ಜಿ ರಾಮ್‌ಜಿ’ ಮಸೂದೆಯನ್ನು ತಕ್ಷಣವೇ ವಾಪಸ್‌ ಪಡೆಯುವಂತೆ ರಾಷ್ಟ್ರಪತಿಗಳು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ, ಸಿಪಿಐ ಪಕ್ಷದ ಕಾರ್ಯಕರ್ತರು ಕಪ್ಪುಬಟ್ಟೆ ಧರಿಸಿ ಮಂಗಳವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ನಾಯಕರು, ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯ ಹೆಸರನ್ನು ಬದಲಾಯಿಸಿರುವುದನ್ನು ತೀವ್ರವಾಗಿ ಖಂಡಿಸಿದರು.

ಈ ಯೋಜನೆಯ ಮೂಲಕ ದೇಶದ ಸುಮಾರು 12 ಕೋಟಿ ಕಾರ್ಮಿಕರು ಜೀವನ ಸಾಗಿಸುತ್ತಿದ್ದು, ಯೋಜನೆಯ ಸ್ವರೂಪವನ್ನು ಡಿ.18ರಂದು ಮಂಡಿಸಿ, ಡಿ.21ರಂದು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ನರೇಗಾ ಯೋಜನೆಯನ್ನು ಬದಲಾಯಿಸುವ ಮೂಲಕ ಗ್ರಾಮೀಣ ಕೂಲಿ ಕಾರ್ಮಿಕರ ಉದ್ಯೋಗಕ್ಕೆ ಕುತ್ತು ತರಲಾಗುತ್ತಿದೆ. ಈಗಾಗಲೇ ಮಂಡಿಸಿರುವ ‘ವಿಬಿ–ಜಿ ರಾಮ್‌ಜಿ’ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಸಿಪಿಐ (ಎಂಎಲ್) ಆಗ್ರಹಿಸಿದೆ.

ಗ್ರಾಮೀಣ ಪ್ರದೇಶವನ್ನು ಕೇಂದ್ರ ಸರ್ಕಾರ ನೋಟಿಫೈ ಮಾಡದಿದ್ದಲ್ಲಿ, ಆ ಪ್ರದೇಶದ ಜನರಿಗೆ ಉದ್ಯೋಗದ ಹಕ್ಕು ಇರುವುದಿಲ್ಲ. ಇಡೀ ದೇಶಕ್ಕೆ ಸಿಕ್ಕಿದ್ದ ಹಕ್ಕು ಆಧಾರಿತ ಯೋಜನೆ ಈಗ ಕೆಲವೇ ಆಯ್ದ ಪ್ರದೇಶಗಳ ಜನರಿಗೆ ಮಾತ್ರ ಸೀಮಿತವಾಗಲಿದೆ. ಖಾತ್ರಿ ಯೋಜನೆಯಡಿ ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಉದ್ಯೋಗ ಒದಗಿಸಬೇಕೆಂಬ ನಿಯಮವಿದ್ದು, ವಿಫಲವಾದರೆ ನಿರುದ್ಯೋಗ ಭತ್ಯೆ ನೀಡಬೇಕಾಗುತ್ತದೆ. ಆದರೆ ಹೊಸ ಮಸೂದೆಯ ಪ್ರಕಾರ, ಪ್ರತಿ ಹಣಕಾಸು ವರ್ಷದಲ್ಲಿ ಆಯಾ ರಾಜ್ಯಕ್ಕೆ ಎಷ್ಟು ಅನುದಾನ ನೀಡಬೇಕು ಎಂಬುದನ್ನು ಕೇಂದ್ರ ಸರ್ಕಾರವೇ ನಿರ್ಧರಿಸುವ ಅಧಿಕಾರ ಪಡೆದುಕೊಳ್ಳುತ್ತದೆ. ಇದು ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದರು.

ಆದ್ದರಿಂದ ‘ವಿಬಿ–ಜಿ ರಾಮ್‌ಜಿ’ ಮಸೂದೆಯನ್ನು ತಕ್ಷಣವೇ ವಾಪಸ್‌ ಪಡೆಯಬೇಕು. ಮಹಾತ್ಮ ಗಾಂಧಿಯವರ ಹೆಸರನ್ನು ಯೋಜನೆಯಲ್ಲಿ ಮುಂದುವರಿಸಬೇಕು. ಜೊತೆಗೆ ಕೇಂದ್ರ ಬಜೆಟ್‌ನಲ್ಲಿ ನರೇಗಾ ಯೋಜನೆಗೆ ಕನಿಷ್ಠ 2 ಲಕ್ಷ ಕೋಟಿ ರೂ. ಅನುದಾನ ನಿಗದಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಕೃಷಿ ಹಾಗೂ ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಹುಲಿಕಟ್ಟಿ ಮೈಲಪ್ಪ, ಸಂದೇರ್ ಪರಶುರಾಮ್, ಸಂತೋಷ ಗುಳೇದಟ್ಟಿ, ಹೊಸಳ್ಳಿ ಮಲ್ಲೇಶ್, ಮಹಮ್ಮದ್ ರಫಿ, ಇಬ್ರಾಹಿಂ ಸಬ್, ಬಾಗಳಿ ರೇಣುಕಮ್ಮ, ಕಲೀಮ್, ರಾಮಣ್ಣ, ಮಂಜು, ಜೋಗಿನ ನಾಗರಾಜ್, ಮೋಹನ್ ಕುಮಾರ್, ವಿನಯ್, ಪ್ರಕಾಶ್, ಕೃಷ್ಣಕುಮಾರ್, ಅಂಜಿನಿ, ರಾಘವೇಂದ್ರ, ಬಾಬು, ಫಕೀರಪ್ಪ, ಅನ್ವರ್ ಭಾಷಾ, ಕೊಟ್ರೇಶ್, ಹನುಮಂತಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.





Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News