ಹೊಸಪೇಟೆ | ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
ವಿಜಯನಗರ (ಹೊಸಪೇಟೆ): ಜಗತ್ತಿಗೆ ಸತ್ಯ, ಅಹಿಂಸೆ ಮತ್ತು ಸಮಾನತೆಯನ್ನು ಸಾರಿದ ಮಹಾತ್ಮ ಗಾಂಧೀಜಿ ವಿಶ್ವಮಾನವರೆನಿಸಿಕೊಂಡಿದ್ದಾರೆ ಎಂದು ಹೊಸಪೇಟೆ ಸಹಾಯಕ ಆಯುಕ್ತರಾದ ಪಿ.ವಿವೇಕಾನಂದ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯ ಜಯಂತಿ ಕಾರ್ಯಕ್ರಮ ಗುರುವಾರ ಉದ್ಘಾಟಿಸಿ ಅವರು ಮಾತನಾಡಿ, ಬ್ರಿಟೀಷರ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಿ ದೇಶವನ್ನು ದಾಸ್ಯಮುಕ್ತಗೊಳಿಸಿದ ಮಹಾತ್ಮ ಗಾಂಧೀಜಿ ಅಗ್ರಗಣ್ಯ ಹೋರಾಟಗಾರರಾಗಿದ್ದಾರೆ ಎಂದು ತಿಳಿಸಿದರು.
ಟಿ.ಬಿ.ಡ್ಯಾಂ ಪೊಲೀಸ್ ವೃತ್ತ ನಿರೀಕ್ಷಕರಾದ ವಿ.ನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಗಾಂಧೀಜಿ ಅವರ ಚಿಂತನೆಗಳನ್ನು ಅರಿಯಲು ವಾರ್ತಾ ಇಲಾಖೆ ಏರ್ಪಡಿಸುವ ‘ಬಾಪು ಪ್ರಬಂಧ ಸ್ಪರ್ಧೆ’ ಸಹಾಯಕವಾಗಿದೆ. ಗಾಂಧೀಜಿ ಸ್ವತಃ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳನ್ನು ಓದಿ ನಿಮ್ಮದೇ ಕಲ್ಪನೆಯಲ್ಲಿಯ ಲೇಖನಗಳನ್ನು ಬರೆಯಲು ಪ್ರಯತ್ನಿಸಿ. ಬರವಣಿಗೆ ಕೌಶಲ್ಯವನ್ನು ವೃದ್ಧಿಸಿ, ನಿಮ್ಮದೇ ಸಾಧನೆ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭ ಜಿಲ್ಲಾ ಮಟ್ಟದ ಬಾಪು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ, ಪದವಿಪೂರ್ವ ಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನಕ್ಕೆ 3,000 ರೂ., ದ್ವಿತೀಯಕ್ಕೆ 2,000 ರೂ., ತೃತೀಯಕ್ಕೆ 1,000 ರೂ. ನಗದು ಮತ್ತು ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿ ಲೆಕ್ಕಪರಿಶೋಧಕ ಶ್ರೀನಿವಾಸ್, ವಾರ್ತಾ ಇಲಾಖೆ ಸಿಬ್ಬಂದಿಗಳಾದ ರಾಮಾಂಜನೇಯ್, ಅಶೋಕ್ ಉಪ್ಪಾರ, ತಾಯೇಶ್, ತಿಪ್ಪೇಶ್, ದೇವರಾಜ್, ಪಿ. ಕೃಷ್ಣಸ್ವಾಮಿ, ಮರಿಯಮ್ಮನಹಳ್ಳಿಯ ರಂಗಚೌಕಿ ಕಲಾ ಟ್ರಸ್ಟ್ ತಂಡದ ಕಲಾವಿದರು ಮತ್ತು ಬಾಪು ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.