×
Ad

ಹೊಸಪೇಟೆ | “ಸ್ವಚ್ಚತಾ ಹೀ ಸೇವಾ-2025” ಅಭಿಯಾನಕ್ಕೆ ಚಾಲನೆ

Update: 2025-09-25 23:28 IST

ವಿಜಯನಗರ (ಹೊಸಪೇಟೆ) : “ಸ್ವಚ್ಚತಾ ಹೀ ಸೇವಾ-2025” ಪಾಕ್ಷೀಕ ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯತ್ ಹಾಗೂ ಹೊಸಪೇಟೆ ತಾಲೂಕು ಪಂಚಾಯತ್‌, ನಗರಸಭೆ ಸಿಬ್ಬಂದಿ ಭಾಗವಹಿಸಿದ ‘ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್’ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಮುಹಮ್ಮದ್‌ ಅಲಿ ಅಕ್ರಮ್ ಶಾ ಅವರು ಗುರುವಾರ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸೆ.17 ರಿಂದ ಅ.2 ರವರೆಗೆ ನಡೆಯುತ್ತಿರುವ ಈ ಅಭಿಯಾನದಡಿ ತಾಲೂಕು ಮತ್ತು ಗ್ರಾಮ ಪಂಚಾಯತ್‌ ಮಟ್ಟದಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. SBM (G) ಹಂತ-2 ಅಡಿಯಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಿ, ಸುಸ್ಥಿರ ನೈರ್ಮಲ್ಯಯುತ ವಾತಾವರಣ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಾರ್ವಜನಿಕರು ಸಹಕರಿಸಿ ಕಸವನ್ನು ಎಲ್ಲಿ ತಲ್ಲಿ ಬಿಸಾಡದೆ, ಮನೆ ಬಾಗಿಲಿಗೆ ಬರುವ ಕಸದ ವಾಹನಕ್ಕೆ ನೀಡುವಂತೆ ಅವರು ಕರೆ ನೀಡಿದರು. ಜೊತೆಗೆ ಪ್ರತೀ ಮನೆ ಸುತ್ತಲೂ ಮೂರು ತಿಂಗಳಿಗೊಮ್ಮೆ ಶ್ರಮದಾನ ಮಾಡುವ ಮೂಲಕ ಆರೋಗ್ಯಕರ ಹಾಗೂ ನೈರ್ಮಲ್ಯಯುತ ಗ್ರಾಮಗಳ ನಿರ್ಮಾಣ ಸಾಧ್ಯವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಕಾರ್ಯಪಾಲಕ ಅಭಿಯಂತರ ದೀಪಾ ಜಿ.ಪಂ, ಮುಖ್ಯ ಲೆಕ್ಕಾಧಿಕಾರಿ ರುದ್ರಪ್ಪ ಅಕ್ಕಿ, ಸಹಾಯಕ ಕಾರ್ಯದರ್ಶಿ ಮೌನೇಶ ವಿ.ಬಿ, ಸಹಾಯಕ ಯೋಜನಾಧಿಕಾರಿ ಉಮೇಶ್ ಎಂ., ಹೊಸಪೇಟೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅಲಂ ಬಾಷ ಸೇರಿದಂತೆ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯ ಜಿಲ್ಲಾ ಸಮಾಲೋಚಕರು ಹಾಗೂ ಜಿಲ್ಲಾ ಪಂಚಾಯತ್‌ ಸಿಬ್ಬಂದಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News