ಹೊಸಪೇಟೆ | ʼವಾರ್ತಾಭಾರತಿʼ ವರದಿ ಫಲಶ್ರುತಿ : ಶೌಚಾಲಯದ ದುರಸ್ತಿಗೆ ಸಿಎಂ ಕಚೇರಿಯಿಂದ ಸೂಚನೆ
ಹೊಸಪೇಟೆ : ನಗರದಲ್ಲಿ ನೀರಿನ ವ್ಯವಸ್ಥೆ ಇಲ್ಲದೇ ಅಧೋಗತಿಗೆ ತಲುಪಿ ಗಬ್ಬೆದ್ದು ನಾರುತ್ತಿದ್ದ ಸಾರ್ವಜನಿಕ ಶೌಚಾಲಯ ದುರಾವಸ್ಥೆ ಕುರಿತು ವಾರ್ತಾಭಾರತಿ ಪತ್ರಿಕೆ ಪ್ರಕಟ ಮಾಡಿರುವ ಸುದ್ದಿ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ತಲುಪಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಶೌಚಾಲಯವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ನೋಟಿಸ್ ನೀಡಲಾಗಿದೆ.
ಹೊಸಪೇಟೆ ನಗರದ 29ನೇ ವಾರ್ಡಿನ ಭಗತ್ ಸಿಂಗ್ ನಗರದ ಸಾರ್ವಜನಿಕ ಶೌಚಾಲಯದ ಬಗ್ಗೆ ಸೆ.6ರ 2025ರಂದು ವಾರ್ತಾಭಾರತಿ ದಿನಪತ್ರಿಕೆಯಲ್ಲಿ "ನೀರಿನ ವ್ಯವಸ್ಥೆಯಿಲ್ಲದ ಭಗತ್ ಸಿಂಗ್ ನಗರದ ಸಾರ್ವಜನಿಕ ಶೌಚಾಲಯ" ಎಂಬ ಶಿರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಮೂಲಭೂತ ಸೌಕರ್ಯ ಕಳಕಳಿಯ ವರದಿಗೆ ಮುಖ್ಯಮಂತ್ರಿ ಕಾರ್ಯಾಲಯ ಸ್ಪಂದನೆ ಮಾಡಿದೆ.
ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು ವಾಸ್ತವಾಂಶದ ಬಗ್ಗೆ ಆದ್ಯತೆಯ ಮೇರೆಗೆ ಪರಿಶೀಲಿಸಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೊಸಪೇಟೆ ನಗರ ಅಭಿವೃದ್ಧಿ ಕೋಶಕ್ಕೆ ನಿರ್ದೇಶಿಸಿದ್ದಾರೆ.
ಹೊಸಪೇಟೆ ಭಗತ್ ಸಿಂಗ್ ಬಡಾವಣೆಯಲ್ಲಿ 30 ವರ್ಷಗಳಿಂದ ಮೂಲ ಸೌಕರ್ಯ ಸೇರಿದಂತೆ ಇಲ್ಲಿನ ಜನಗಳು ಬಹಿರ್ದೆಸೆಗೆ ತೆರಳಲು ಸಮಸ್ಯೆ ಎದುರಿಸುತ್ತಿದ್ದಾರೆ. ಬಡಾವಣೆಯಲ್ಲಿ ಸರಿಸುಮಾರು 150ಕ್ಕೂ, ಹೆಚ್ಚು ಕುಟುಂಬಗಳಿವೆ. ಇಲ್ಲಿ ನೀರಿನ ಮೋಟಾರ್ ವ್ಯವಸ್ಥೆ ಇದ್ದರೂ, ಸಹ ನೀರು ಬರುವುದಿಲ್ಲ. ಶೌಚಾಲಯ ಇದ್ದು, ಉಪಯೋಗಕ್ಕೆ ಬರದೇ ಅಲ್ಲಿನ ನಿವಾಸಿಗಳು ತೊಂದರೆಯನ್ನು ಅನುಭವಿಸುತ್ತಿರುವ ಕುರಿತು ವಾರ್ತಾ ಭಾರತಿ ಪತ್ರಿಕೆಯು ವರದಿ ಬಿತ್ತರಿಸಿತ್ತು.
ವರದಿಯನ್ನು ಮುಖ್ಯಮಂತ್ರಿಗಳ ಕಾರ್ಯಾಲಯ ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ಇಲಾಖೆಗೆ ಸರಿಪಡಿಸಲು ಸೂಚನೆ ನೀಡಿದೆ. ನೋಟೀಸ್ ಬಂದ ಹಿನ್ನೆಲೆ ನಗರಸಭೆ ಅಧಿಕಾರಿಗಳು ಶೌಚಾಲಯ ಸ್ವಚ್ಛತಾ ಸೇರಿದಂತೆ ನೀರಿನ ಸೌಲಭ್ಯದ ಕಾಮಗಾರಿ ಆರಂಭಿಸಿದ್ದಾರೆ.