×
Ad

ಹೊಸಪೇಟೆ | ಎಸ್‌ಟಿಗೆ ಕುರುಬ ಸಮಾಜ ಸೇರ್ಪಡೆ ವಿರೋಧಿಸಿ ವಾಲ್ಮೀಕಿ ಸಮುದಾಯದಿಂದ ಪ್ರತಿಭಟನೆ

Update: 2025-09-25 22:17 IST

ಹೊಸಪೇಟೆ : ನಗರದ ವಾಲ್ಮೀಕಿ ವೃತ್ತದಲ್ಲಿ ಸಾವಿರಾರು ವಾಲ್ಮೀಕಿ ಸಮುದಾಯದ ಸದಸ್ಯರು ಕಪ್ಪು ಟವೆಲ್ ಧರಿಸಿ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ಸಮುದಾಯದ ವಿರುದ್ಧ ನಡೆಯುತ್ತಿರುವ ಅನ್ಯಾಯವನ್ನು ಖಂಡಿಸಿ ನಡೆದ ಪ್ರತಿಭಟನಾ ಮೆರವಣಿಗೆಯು ವೀರ ಮದಕರಿ ನಾಯಕ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಮಾರ್ಗವಾಗಿ ಡಾ.ಪುನೀತ್ ರಾಜಕುಮಾರ್ ವೃತ್ತದವರೆಗೆ ಸಾಗಿತು. ಅಲ್ಲೊಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾಕಾರರು ಧರಣಿ ನಡೆಸಿದರು.

ಪ್ರಬಲವಾದ ಕುರುಬ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಇದರಿಂದ ನಮ್ಮ ಮೀಸಲಾತಿ ಹಕ್ಕುಗಳನ್ನು ಕಸಿದುಕೊಳ್ಳುವ ಸಂಚು ಅಡಗಿದೆ. ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ವಾಲ್ಮೀಕಿ ಸಮಾಜದ ಮೀಸಲಾತಿ ಕಡಿತಗೊಳಿಸುವುದು ದೊಡ್ಡ ಅನ್ಯಾಯ. ಯಾವುದೇ ಕಾರಣಕ್ಕೂ ಕುರುಬರು ಸೇರಿದಂತೆ ಬೇರೆ ಯಾವ ಸಮುದಾಯವನ್ನೂ ಎಸ್‌ಟಿ ಪಟ್ಟಿಗೆ ಸೇರಿಸಬಾರದು ಎಂದು ಮುಖಂಡರು ಎಚ್ಚರಿಸಿದರು.

ನವೆಂಬರ್ 5ರ ಒಳಗಾಗಿ ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆಯನ್ನು ಸಂವಿಧಾನಾತ್ಮಕವಾಗಿ ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News