×
Ad

ರೈತರ ಹಕ್ಕನ್ನು ಕಸಿದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ: ಗುರುಲಿಂಗಪ್ಪ ಅಂಗಡಿ ಆರೋಪ

Update: 2025-09-09 12:46 IST

ವಿಜಯಪುರ : ಜಮೀನಿಗೆ ವೈಜ್ಞಾನಿಕ ದರ ಬಾರದೇ ಇದ್ದಾಗ ಅದನ್ನು ಕೋರ್ಟ್ ನಲ್ಲಿ ಪ್ರಶ್ನೆ ಮಾಡುವುದು ಸಂವಿಧಾನ ನೀಡಿರುವ ಹಕ್ಕು, ಆದರೆ ಈ ಹಕ್ಕನ್ನು ಕಸಿದುಕೊಳ್ಳುವ ಕಾರ್ಯ ಕಾಂಗ್ರೆಸ್ ಮಾಡುತ್ತಿದೆ‌ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಿನ ಅರ್ಪಣೆ ಮಾಡಿ ಸುಮ್ಮನೆ ಹೋಗಬೇಕಿದ್ದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಈ ನೆಲದಲ್ಲಿ ನಿಂತು ರೈತರಿಗೆ ಅಗೌರವ ತೋರಿದ್ದಾರೆ. ಜಮೀನು ಎಂದರೆ ಮಾತೃ ಸಮಾನ, ಈ ಜಮೀನು ತ್ಯಾಗ ಮಾಡುವ ರೈತರ ಅಹವಾಲು ಆಲಿಸಬೇಕಿತ್ತು, ಆದರೆ ಕಾಟಾಚಾರಕ್ಕೆ ಅಹವಾಲು ಸ್ವೀಕರಿಸಿದ್ದಾರೆ ಎಂದರು.

ಭೂ ಸ್ವಾಧೀನ ಪರಿಹಾರ ವಿಷಯವಾಗಿ ನ್ಯಾಯವಾದಿಗಳು ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನಾಲಿಗೆ ಹರಿಬಿಟ್ಟಿದ್ದಾರೆ. ದಾರಿ ತಪ್ಪಲು ರೈತರು ದಡ್ಡರಲ್ಲ. ಈ ಹೇಳಿಕೆ ಮೂಲಕ ಸಮಸ್ತ ರೈತ ಕುಲ ಹಾಗೂ ನ್ಯಾಯದಾನಕ್ಕಾಗಿ ತೊಡಗಿರುವ ಸಮಸ್ತ ನ್ಯಾಯವಾದಿಗಳಿಗೆ ಅವಮಾನ ಮಾಡಿದ್ದು, ಕೂಡಲೇ ರೈತ ಹಾಗೂ ನ್ಯಾಯವಾದಿಗಳ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗಿಂತ ನೂರು ಪಟ್ಟು ಬುದ್ದಿ ರೈತರಿಗೆ ಇದೆ, ಅವರು ದಾರಿ ತಪ್ಪುತ್ತಾರೆ ಎನ್ನುವುದು ರೈತರ ಬಗ್ಗೆ ಅಗೌರವ ತೋರುವ ಪದವಾಗಿದೆ, ವಕೀಲರು ಹಾದಿ ತಪ್ಪಿಸುತ್ತಾರೆ ಎಂದರೆ ಏನರ್ಥ? ನ್ಯಾಯವಾದಿಗಳು ಇರುವ ಕಾರಣದಿಂದ ನ್ಯಾಯದಾನದ ಪವಿತ್ರ ಕಾರ್ಯ ನಡೆಯುತ್ತಿದೆ. ಈ ನ್ಯಾಯವಾದಿಗಳ ಬಗ್ಗೆ ಅಗೌರವ ತೋರುವ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದು ಕೂಡಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಕೃಷ್ಣಾ ಮೂರನೇಯ ಹಂತದ ಯೋಜನೆ ಬಗ್ಗೆ ಮಾತ್ರ ಸರ್ಕಾರ ಮಾತನಾಡುತ್ತಿದೆ, ಎರಡನೇಯ ಹಂತದ ಯೋಜನೆ ಪೂರ್ಣ ಪ್ರಮಾಣದಲ್ಲಿ ಪೂರ್ಣಗೊಂಡಿಲ್ಲ. ಹೊಲಗಳನ್ನು ಅಗೆಯಲಾಗಿದೆ, ಆದರೆ ಕಾಲುವೆ ನಿರ್ಮಾಣ ಆಗಿಲ್ಲ ಎಂದರು.

ಆಗಿರುವ ಅನ್ಯಾಯ ಪ್ರಶ್ನೆಯನ್ನು ಕೋರ್ಟ್ ನಲ್ಲಿ ಮಾಡಿದರೆ ಅದಕ್ಕೂ ಅವಕಾಶವಿಲ್ಲ. ಹೋರಾಟ ಮಾಡಿದರೆ ಲಾಠಿ ಏಟು. ಇದು ಕಾಂಗ್ರೆಸ್ ಸರ್ಕಾರವಲ್ಲ ಇದು ಒಂದು ರೀತಿ ಕಾಂಗ್ರೆಸ್ ನಾಟಕ ಕಂಪನಿಯಾಗಿದೆ. ಅಕಾಲಿಕ ಮಳೆಯಾಗಿ ಇಂದು ಜನತೆ ತೊಂದರೆ ಅನುಭವಿಸುತ್ತಿದ್ದಾರೆ, ಆದರೆ ಇದಕ್ಕೆ ಮಿಡಿಯುವ ಹೃದಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ, ಕಾಂಗ್ರೆಸ್ ಕಲ್ಲು ಬಂಡೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಮುಖಂಡರಾದ ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ವಿಜಯ ಜೋಶಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News