ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ಸರಕಾರ ಬದ್ಧ : ಎಂ.ಬಿ.ಪಾಟೀಲ್
ವಿಜಯಪುರ : ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಪ್ರತ್ಯೇಕ ಚರ್ಚೆ ಆಗಬೇಕು. ಈ ವಿಚಾರದಲ್ಲಿ ಸರಕಾರ ಕೂಡ ಬದ್ಧವಾಗಿದ್ದು, ಚರ್ಚೆ ಕೂಡ ಆಗುತ್ತೆ. ಪರಿಹಾರ ಕೊಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನದ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆ ವಿಚಾರದಲ್ಲಿ ಕೇಂದ್ರ ಸರಕಾರ ನೆರವಿಗೆ ಬಂತಾ?, ಎಫ್‌ಆರ್‌ಪಿ ಫಿಕ್ಸ್ ಮಾಡುವುದು ಕೇಂದ್ರ ಸರಕಾರ, ಕೇಂದ್ರ ಸರಕಾರ ಒಂದು ರೂಪಾಯಿ ಕೂಡ ಕೊಟ್ಟಿಲ್ಲ ಎಂದು ದೂರಿದರು.
ಕೇಂದ್ರ ಸರಕಾರವು ಎಥಿನಾಲ್ ಕೂಡ ಅವರು ಶೇ.50 ರಷ್ಟು ಖರೀದಿ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿಯವರಿಗೆ ಹೋಗಿ ಭೇಟಿಯಾದರೂ ಏನಾದರೂ ಕೊಟ್ಟರಾ?, ಸದ್ಯ ಮೆಕ್ಕೆಜೋಳಕ್ಕೆ ಏನಾದರೂ ಕೊಟ್ಟರೂ, ಕಬ್ಬು ಹಾಗೂ ಮೆಕ್ಕೆಜೋಳ ಕೇಂದ್ರ ಸರಕಾರದ ಜವಾಬ್ದಾರಿ ಎಂದು ಹೇಳಿದರು.
ಯಡಿಯೂರಪ್ಪ ಸುಪುತ್ರ ವಿಜಯೇಂದ್ರ ರೈತರ ಹೋರಾಟದಲ್ಲಿ ಹೋಗಿ ಮಲಗುತ್ತಾರೆ. ಮೊದಲು ಕೇಂದ್ರದಲ್ಲಿ ಪರಿಹಾರ ಕೊಡಿಸಲಿ. ಕಬ್ಬು ಬೆಳೆಗಾರರ ಹೋರಾಟ, ಮೆಕ್ಕೆಜೋಳದ ಹೋರಾಟ ಕೇಂದ್ರ ಸರಕಾರದ್ದು ಎಂದರು.