ಈ ಬಾರಿ ಸಚಿವ ಸ್ಥಾನ ದೊರಕುವ ನಿರೀಕ್ಷೆ ಇದೆ : ಸಲೀಂ ಅಹ್ಮದ್
ವಿಜಯಪುರ : ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಅಲಂಕರಿಸಿದ ಎಲ್ಲರಿಗೂ ಸಚಿವ ಸ್ಥಾನ ದೊರಕಿದೆ. ಆ ಪಟ್ಟಿಯಲ್ಲಿ ನಾನೊಬ್ಬನೇ ಉಳಿದುಕೊಂಡಿರುವೆ. ಈ ಬಾರಿ ಸಚಿವ ಸ್ಥಾನ ದೊರಕುವ ನಿರೀಕ್ಷೆ ಇದೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಕಾರ್ಯಾಧ್ಯಕ್ಷರಿಗೂ ಸಚಿವ ಸ್ಥಾನ ದೊರಕಿದೆ. ಕೆಲವು ಹಿರಿಯ ಸಚಿವರನ್ನು ಪಕ್ಷದ ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿಸಿ ಸಂಪುಟ ವಿಸ್ತರಣೆ, ಪುನರ್ ರಚನೆ ಮಾಡುವ ಸಾಧ್ಯತೆ ಇದೆ. ಆದರೆ ಎಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಷಯ, ನಾನು ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ್ದೇನೆ. ಹೀಗಾಗಿ ನಾನು ಸಚಿವ ಸ್ಥಾನಕ್ಕಾಗಿ ಸಾತ್ವಿಕ ಮನೋಭಾವದಿಂದ ಒತ್ತಾಯಿಸುತ್ತಿರುವೆ ಅಷ್ಟೇ, ಆದರೆ ಇದು ನನ್ನ ಹಕ್ಕೊತ್ತಾಯವಂತೂ ಅಲ್ಲ, ಸಚಿವ ಸ್ಥಾನ ದೊರಕುವ ನಿರೀಕ್ಷೆಯೂ ಇದೆ ಎಂದರು.
ರಾಜ್ಯ ಸರಕಾರ ಎರಡು ವರ್ಷದಲ್ಲಿ ನುಡಿದಂತೆ ನಡೆದಿದೆ. ಐದು ಗ್ಯಾರಂಟಿ ಗಳನ್ನು ಮೂರು ತಿಂಗಳಲ್ಲಿ ಅನುಷ್ಠಾನ ಮಾಡಲಾಗಿದೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಸಂಚಾರ ದಾಖಲೆ ನಿರ್ಮಿಸಿದೆ. ಗೃಹಲಕ್ಷ್ಮೀ ಯೋಜನೆಯು ಮಹಿಳೆಯರಿಗೆ ಅನುಕೂಲವಾಗಿದೆ. ಎಲ್ಲರಿಗೂ ಕಾರ್ಯಕ್ರಮಗಳು ಮುಟ್ಟಿವೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ, ಶಾಂತಿ ಸಹಬಾಳ್ವೆ ಹೆಚ್ಚಾಗಿದೆ. ಜತೆಗೆ ತಾಲೂಕು, ಜಿಲ್ಲಾ, ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದರು.
ರಾಹುಲ್ ಗಾಂಧಿ ಬೆಂಗಳೂರಿನ ಮಹದೇವಪುರ ಮತಕ್ಷೇತ್ರ, ಕಲಬುರಗಿ ಜಿಲ್ಲೆಯ ಆಳಂದ ಮತಕ್ಷೇತ್ರ ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ನಡೆದ ಮತಗಳ್ಳತನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ನ.25ರಂದು ದೆಹಲಿಯಲ್ಲಿ ದೊಡ್ಡ ಮಟ್ಟದ ಆಂದೋಲನ ಯೋಜಿಸಲಾಗಿದೆ. ಜಗತ್ತಿನಲ್ಲಿ ಸುಳ್ಳು ಹೇಳುವುದರಲ್ಲಿ ಮೋದಿ ಅವರಿಗೆ ಆಸ್ಕರ್ ಪ್ರಶಸ್ತಿ ಸಿಗಬೇಕು ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಮುಖಂಡರಾದ ಜಮೀರ್ ಭಕ್ಷಿ, ಶಖೀಲ್ ಬಾಗಮಾರೆ, ಚಾಂದಸಾಬ ಗಡಗಲಾವ, ರಮೀಜಾ ನದಾಫ್, ಆಫ್ತಾಬ್ ಖಾದ್ರಿ ಇನಾಮದಾರ, ಶ್ರೀದೇವಿ ಉತ್ಲಾಸರ, ಸರ್ಫರಾಜ್ ಮಿರ್ದೇ ಮುಂತಾದವರು ಉಪಸ್ಥಿತರಿದ್ದರು.