ನಿಡಗುಂದಿ | ತೊಗರಿಗೆ 12 ಸಾವಿರ ರೂ. ಬೆಂಬಲ ಬೆಲೆ ಘೋಷಿಸಿ : ರೈತ ಸಂಘ, ಹಸಿರು ಸೇನೆ ಆಗ್ರಹ
ನಿಡಗುಂದಿ : ಕೇಂದ್ರ ಸರಕಾರ ಪ್ರತಿ ಕ್ವಿಂಟಾಲ್ ತೊಗರಿಗೆ 12 ಸಾವಿರ ರೂ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಘೋಷಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿಡಗುಂದಿ ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಎ.ಡಿ.ಅಮರಾವಡಗಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನಿಂಗರಾಜ ಆಲೂರ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ತೊಗರಿ ಬೆಳೆಯು ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದೆ. ಕೂಡಲೇ ಬೆಳೆ ಹಾನಿಗೆ ಅಗತ್ಯ ಪರಿಹಾರ ನೀಡಬೇಕು. ಉಳಿದ ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ 12 ಸಾವಿರ ರೂ. ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರಗಳ ಮೂಲಕ ಖರೀದಿಸಿ ತೊಗರಿ ಬೆಳೆಗಾರರಿಗೆ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಸರಕಾರ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ಆರಂಭಿಸಲು ವಿಳಂಬ ನೀತಿ ಅನುಸರಿಸಬಾರದು. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಕೆಲ ದಿನಗಳಲ್ಲಿ ತೊಗರಿ ರಾಶಿ ಆರಂಭಗೊಳ್ಳಲಿದ್ದು, ಈಗಲೇ ಖರೀದಿ ಕೇಂದ್ರ ಆರಂಭಿಸಲು ಸರಕಾರ ಎಲ್ಲ ಸಿದ್ಧತೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಸೀತಪ್ಪ ಗಣಿ, ಕೆ.ಎಂ.ಬಿರಾದಾರ(ಗುಡ್ನಾಳ), ರವಿಶಂಕರ ಕೋತಿನ ಮಾತನಾಡಿದರು.
ತಾಲೂಕು ಉಪಾಧ್ಯಕ್ಷ ಸಾಬಣ್ಣ ಅಂಗಡಿ, ಕರವೇ ತಾಲೂಕಾಧ್ಯಕ್ಷ ಆನಂದ ಹಡಗಲಿ, ಪೀರಸಾಬ ನದಾಫ್, ವೆಂಕಟೇಶ ವಡ್ಡರ, ಸುಭಾಷ ಚೋಪಡೆ, ಮಲ್ಲಯ್ಯ ನಾಗೂರಮಠ, ಕೃಷ್ಣಪ್ಪಗೌಡ ಬಿರಾದಾರ, ಪಾರ್ವತಿ ಲಮಾಣಿ, ಪಾರ್ವತಿ ಲಮಾಣಿ, ಅಲ್ಲಾಬಕ್ಷ ಲಷ್ಕರಿ, ಡಾ.ಐ.ಆರ್.ಪಾಟೀಲ್, ಚಾಂದಸಾಬ್ ನದಾಫ್, ಮೌಲಾಲಿ ಕಂದಗಲ್ಲ, ಚಂದಪ್ಪ ಹದ್ಲಿ, ಬಶೀರ ನದಾಫ್, ಕರಿಯಪ್ಪ ಆಲೂರು ಮುಂತಾದವರು ಇದ್ದರು.