×
Ad

ವಿಜಯಪುರ: ಬ್ಯಾಂಕ್‌ನಿಂದ 20 ಕೋಟಿ ರೂ. ಮೌಲ್ಯದ ನಗ, ನಗದು ದರೋಡೆ; ಆರೋಪಿಗಳು ಪರಾರಿ

Update: 2025-09-17 10:43 IST

ವಿಜಯಪುರ: ಬ್ಯಾಂಕ್ ಸಿಬ್ಬಂದಿಗಳನ್ನು ಬೆದರಿಸಿ, 20 ಕೋಟಿ ರೂ. ಮೌಲ್ಯದ ಚಿನ್ನಾಭಾರಣ ಹಾಗೂ 1 ಕೋಟಿ ನಾಲ್ಕು ಲಕ್ಷ ರೂ. ನಗದು ದರೋಡೆ ಮಾಡಿರುವ ಘಟನೆ ಚಡಚಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಚಡಚಣ ಪಟ್ಟಣದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಮಂಗಳವಾರ ಸಂಜೆ ಎಸ್‌ಬಿಐ ಫಾರ್ಮ್ ತುಂಬುವ ನೆಪದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದ ದರೋಡೆಕೋರರು ಕಂಟ್ರಿ ಪಿಸ್ತೂಲ್‌ ಮತ್ತು ಮಾರಕಾಸ್ತ್ರಗಳನ್ನು ಕೃತ್ಯಕ್ಕೆ ಬಳಸಿದ್ದಾರೆ.   

ಈ ಪ್ರಕರಣದಲ್ಲಿ ಕಣ್ಣಿಗೆ ಸನ್‌ಗ್ಲಾಸ್, ಬ್ಲ್ಯಾಕ್ ಕೋವಿಡ್ ಮಾಸ್ಕ ಧರಿಸಿ‌ದ್ದ ಓರ್ವ ಬ್ರ್ಯಾಂಚ್ ಮ್ಯಾನೇಜರ್‌ಗೆ ಗನ್ ತೋರಿಸಿ ಬೇಗನೆ ಲಾಕರ್ ಖೋಲೋ ಎಂದು ಬೆದರಿಸಿದ್ದಾನೆ. ಇದಾದ ಕೂಡಲೇ ಮತ್ತಿಬ್ಬರು ಬ್ಯಾಂಕ್‌ಗೆ ನುಗ್ಗಿ ಬ್ಯಾಂಕ್ ಸಿಬ್ಬಂದಿ, ಗ್ರಾಹಕರನ್ನು ಬಾತ್‌ರೂಮ್ ಕಡೆಗೆ ಕರೆದುಕೊಂಡು ಹೋಗಿದ್ದಾರೆ. ಇನ್ನೊಬ್ಬ ಲಾಕರ್ ಓಪನ್ ಮಾಡಿದ್ದು, ಆರೋಪಿಗಳು  20 ಕೋಟಿ ಮೌಲ್ಯದ 20 ಕೆಜಿ ಚಿನ್ನ ಹಾಗೂ 1 ಕೋಟಿ ನಾಲ್ಕು ಲಕ್ಷ ನಗದು ದರೋಡೆ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿ, ತನಖೆ ಮುಂದೆವರಿಸಿದ್ದಾರೆ.

ಬ್ಯಾಂಕ್‌ನಲ್ಲಿದ್ದ ಹಾಗೂಸುತ್ತಮುತ್ತಲ ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾರೆ.

ಮಹಾರಾಷ್ಟ್ರ ಸಂಪರ್ಕಿಸುವ ಹಾಗೂ ಚಡಚಣದ ಇತರೆ ರಸ್ತೆಗಳಿಗೂ ನಾಕಾ ಬಂದಿ ಹಾಕಲಾಗಿದ್ದು,  ಮಹಾರಾಷ್ಟ್ರದ ದರೋಡೆಕೋರರ ಗ್ಯಾಂಗ್‌ನಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.

ದರೋಡೆಕೋರರಲ್ಲಿ ಓರ್ವ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಹುಲಜಂತಿ ಗ್ರಾಮದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಹುಲ್ಲಜಂತಿ ಗ್ರಾಮದಲ್ಲಿ ದರೋಡೆಕೋರರು ಬೈಕ್‌ಗೆ ಢಿಕ್ಕಿ ಹೊಡೆದಿದ್ದಾರೆ. ದರೋಡೆಕೋರನನ್ನು ಬೈಕ್ ಸವಾರ ಹಾಗೂ ಗ್ರಾಮಸ್ಥರು ಬೆನ್ನುಹತ್ತಿದ್ದರು. ಗ್ರಾಮದಲ್ಲೇ ವಾಹನ ಚಲಾಯಿಸಿ ರಸ್ತೆ ಬಂದ್ ಆದ ಕಾರಣ ಗ್ರಾಮಸ್ಥರ ಮಧ್ಯೆ ಲಾಕ್ ಆಗಿದ್ದರು. ಗ್ರಾಮಸ್ಥರಿಗೆ ಪಿಸ್ತೂಲ್ ತೋರಿಸಿ ವಾಹನ ಬಿಟ್ಟು ದರೋಡೆ ಮಾಡಿ ಆರೋಪಿಗಳು ನಗದು, ಚಿನ್ನಾಭರಣದ ಮೂಟೆ ಹೊತ್ತು ಬೇರೆ ಬೇರೆಯಾಗಿ ಪರಾರಿಯಾಗಿದ್ದಾರೆ.  ದರೋಡೆಕೋರರ ಪತ್ತೆಗೆ ಬಲೆ ಬೀಸಿರುವ ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News