ಬಿಟ್ ಕಾಯಿನ್ ಹಗರಣ ಮರುತನಿಖೆ : ಹಗರಣವನ್ನು ಮುಚ್ಚಿ ಹಾಕಿತ್ತೇ ಬೊಮ್ಮಾಯಿ ಸರಕಾರ ?
ಮತ್ತೆ ಬಿಟ್ ಕಾಯಿನ್ ಸದ್ದು ಜೋರಾಗತೊಡಗಿದೆ. ಆದರೆ ಈ ಬಾರಿ ಸದ್ದಾಗುತ್ತಿರುವುದು ಬಿಜೆಪಿ ಸರ್ಕಾರದಲ್ಲಿ ಆದಂತೆ ಹಗರಣ, ಬಂಧನ, ಏನೇನೋ ರಹಸ್ಯ ನಡೆ, ಏನೇನೋ ಗುಸುಗುಸು, ಕೇಳಿಬಂದ ಯಾರ್ಯಾರೋ ನಾಯಕರ ಹೆಸರುಗಳು - ಇತ್ಯಾದಿಗಳ ಮೂಲಕ ಅಲ್ಲ. ಬದಲಿಗೆ, ಬಿಜೆಪಿ ಸರ್ಕಾರದಲ್ಲಿ ಒಂದು ಹಂತದಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಮನೆಗೆ ಹೋಗಬೇಕಾಗಿ ಬರುತ್ತದೇನೊ ಎನ್ನುವಲ್ಲಿವರೆಗೂ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣದ ಮರುತನಿಖೆಗೆ ಈಗ ಕಾಂಗ್ರೆಸ್ ಸರ್ಕಾರ ಮುಂದಾಗುವ ಮೂಲಕ.
ಬಿಟ್ ಕಾಯಿನ್ ಹಗರಣದ ಬಗ್ಗೆ ಮರುತನಿಖೆ ನಡೆಸುವುದಾಗಿ ಗೃಹಸಚಿವ ಜಿ ಪರಮೇಶ್ವರ್ ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೇ ಹಗರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಸಿಐಡಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ಸರ್ಕಾರವನ್ನು ಬಹುವಾಗಿ ಕಾಡಿದ್ದ ಹಗರಣಗಳಲ್ಲಿ ಬಿಟ್ ಕಾಯಿನ್ ಹಗರಣವೂ ಒಂದಾಗಿತ್ತು. ರಾಜ್ಯದ ಆಗಿನ ಹಲವು ಪ್ರಭಾವಿ ಸಚಿವರ ಮಕ್ಕಳು ಕೂಡ ಅದರಲ್ಲಿ ಭಾಗವಹಿಸಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿದ್ದವು. ಜೊತೆಗೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳೇ ಅವರೊಂದಿಗೆ ಶಾಮೀಲಾಗಿದ್ದಾರೆ ಎನ್ನಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧವೇ ಆರೋಪವಿದೆ ಎಂದೂ ವಿಪಕ್ಷಗಳು ದೂರಿದ್ದವು.
ಪ್ರಕರಣವನ್ನು ಮುಚ್ಚಿಹಾಕಲು ಬೊಮ್ಮಾಯಿ ಯತ್ನಿಸುತ್ತಿದ್ದಾರೆ ಎಂದೂ ಕಾಂಗ್ರೆಸ್ ನೇರವಾಗಿ ಆರೋಪಿಸಿತ್ತು. 5 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಈ ಬೃಹತ್ ಹಗರಣದ ಸಮಗ್ರ ತನಿಖೆಗೆ ಅದೇಶ ನೀಡುವ ಬದಲು, ಅದೊಂದು ಗಂಭೀರ ಪ್ರಕರಣವಲ್ಲ ಎನ್ನುವ ಮೂಲಕ ಬೊಮ್ಮಾಯಿ ಪ್ರಕರಣ ಮುಚ್ಚಿಹಾಕಲು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದರು. ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ನಳೀನ್ ಕುಮಾರ್ ಕಟೀಲ್ ಮತ್ತು ಬೊಮ್ಮಾಯಿ ಆಪ್ತ ಜಾಮೀನು ಕೊಡಿಸಿದ್ದಾರೆ ಎಂಬ ಆರೋಪವೂ ಆಗ ಕೇಳಿಬಂದಿತ್ತು.
ಬಿಡುಗಡೆಯಾದ ಶ್ರೀಕಿ, ಈ ಹಗರಣವೇ ಬೋಗಸ್ ಎಂದು ಹೇಳಿದ್ದ. ಅವತ್ತು ಅವನು ಆಟೊ ಹತ್ತಿ ಹೋದದ್ದು ಸುದ್ದಿಯಾಗಿತ್ತು. ಆಮೇಲೆ ಆತನ ಪತ್ತೆಯಿಲ್ಲ. ಡ್ರಗ್ಸ್ ವ್ಯಸನಿ ಆಗಿರುವ ಶ್ರೀಕಿ, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ. ಹೀಗಾಗಿ, ಆತನಿಗೆ ಪೋಷಕರು ಕೆಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಹೀಗೆ ರಾಜ್ಯದಲ್ಲಿ ಭಾರೀ ಸದ್ದುಮಾಡಿ, ರಾಜಕಾರಣದಲ್ಲಿಯೂ ಈ ಹಗರಣ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಅಷ್ಟಕ್ಕೂ ಏನಿದು ಬಿಟ್ ಕಾಯಿನ್ ? ರೂಪಾಯಿ, ಡಾಲರ್ಗಳಂತೆಯೆ ಬಿಟ್ ಕಾಯಿನ್ ಕೂಡ ಒಂದು ಕರೆನ್ಸಿ. ಆದರೆ ಇದು ನಿಗೂಢ ಹಣ – ಕ್ರಿಪ್ಟೊ ಕರೆನ್ಸಿ. ಕೈಗೆ ಸಿಗದ, ಕಣ್ಣಿಗೆ ಕಾಣಿಸದ ಇದು ಡಿಜಿಟಲ್ ಕರೆನ್ಸಿ. ಕಂಪ್ಯೂಟರ್ ಅಥವಾ ಮೊಬೈಲ್ನಲ್ಲಿ ಅಂಕಿಗಳ ರೂಪದಲ್ಲಷ್ಟೇ ಇದನ್ನು ನೋಡಬಹುದು.
2009ರಲ್ಲಿ ಕ್ರಿಪ್ಟೋಗ್ರಫಿ ಎಂಬ ತಂತ್ರಜ್ಞಾನದ ಮೂಲಕ ಈ ಡಿಜಿಟಲ್ ಕರೆನ್ಸಿಯನ್ನು ಸೃಷ್ಟಿಸಲಾಯಿತು.
ಇದರಲ್ಲಿ ಬ್ಯಾಂಕ್ ಹಾಗೂ ಇತರೆ ಯಾವುದೇ ಮಧ್ಯವರ್ತಿಗಳಿಲ್ಲದೆ, ಅತಿ ಕಡಿಮೆ ವರ್ಗಾವಣೆ ಶುಲ್ಕದಲ್ಲಿ ವಹಿವಾಟು ನಡೆಸಬಹುದು ಎನ್ನಲಾಗುತ್ತದೆ. ಬಿಟ್ ಕಾಯಿನ್ ವ್ಯವಹಾರಕ್ಕೆ ಬಳಕೆದಾರರ ವೈಯಕ್ತಿಕ ವಿವರದ ಅಗತ್ಯವಿರುವುದಿಲ್ಲ. ಅನಾಮಿಕರಾಗಿಯೇ ವಹಿವಾಟು ನಡೆಸಬಹುದು ಎಂದು ಹೇಳಲಾಗುತ್ತದೆ.
ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಸೂತ್ರಧಾರ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಒಬ್ಬ ಹ್ಯಾಕರ್. ಬೆಂಗಳೂರಿನಲ್ಲಿ ಪಿಯುಸಿ ಮುಗಿಸಿದ್ದ ಶ್ರೀಕಿ, ನೆದರ್ಲೆಂಡ್‌ನಲ್ಲಿ ಪದವಿ ಪೂರ್ಣಗೊಳಿಸಿದ್ದ. ಕಾಲೇಜು ದಿನಗಳಲ್ಲಿ ಖ್ಯಾತ ಹ್ಯಾಕರ್ ಗಳ ಸ್ನೇಹ ಬೆಳೆಸಿ ನಂತರ, ಅಂತರರಾಷ್ಟ್ರೀಯ ಹ್ಯಾಕರ್ ಆಗಿ ಬದಲಾಗಿದ್ದ.
ವಿವಿಧ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್‌ಫಾರ್ಮ್‌ಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಸಾವಿರಾರು ಬಿಟ್ ಕಾಯಿನ್‌ಗಳನ್ನು ಈತ ಕದ್ದಿದ್ದ ಎಂದು ಆರೋಪಿಸಲಾಗಿತ್ತು. ಹ್ಯಾಕ್ ಮಾಡಿ ಗಳಿಸಿದ್ದ ಹಣ, ಬಿಟ್ ಕಾಯಿನ್ ರೂಪದಲ್ಲಿ ಹೂಡಿಕೆಯಾಗಿದ್ದ ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗಿತ್ತು. ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ ಆತ ಅಂತಾರಾಷ್ಟ್ರೀಯ ಹ್ಯಾಕರ್ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ತನಿಖೆಯ ದಿಕ್ಕು ಬದಲಾಗಿತ್ತು. ಕಡೆಗೆ ಆತ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದುದು ಬಯಲಾಗಿತ್ತು.
ಇದರ ನಡುವೆಯೇ, ರಾಜ್ಯ ಸರ್ಕಾರದ ಇ–ಸಂಗ್ರಹಣಾ ಪೋರ್ಟಲ್ ಜಾಲತಾಣವನ್ನೂ ಶ್ರೀಕಿ ಹ್ಯಾಕ್ ಮಾಡಿದ್ದ ಹಾಗೂ 46 ಕೋಟಿ ದೋಚಿದ್ದ ಸಂಗತಿ ಹೊರಬಿದ್ದಿತ್ತು.
ಪ್ರಕರಣ ಬೆಳಕಿಗೆ ಬಂದದ್ದು ಯಾವಾಗ?
2015, 2016ರಲ್ಲಿಯೇ ಶ್ರೀಕಿ ಎರಡು ಬಾರಿ ಬಿಟ್ ಫಿನೆಕ್ಸ್ ಎಂಬ ಬಿಟ್‌ಕಾಯಿನ್ ಎಕ್ಸ್ ಚೇಂಜ್ ಅನ್ನು ಹ್ಯಾಕ್ ಮಾಡಿದ್ದ. ಆಗ ಆತ ದೋಚಿದ್ದ ಮೊತ್ತವೇ ಹತ್ತಿರ ಹತ್ತಿರ 5 ಸಾವಿರ ಕೋಟಿ ಎನ್ನಲಾಗಿತ್ತು. 2017ರಲ್ಲಿ ಬಿಟ್ ಕ್ಲಬ್ ನೆಟ್‌ವರ್ಕ್ ಸರ್ವರ್ ಹ್ಯಾಕ್ ಮಾಡಿ ಬಿಟ್ ಕಾಯಿನ್‌ಗಳನ್ನು ದೋಚಿದ್ದ. 2020 ನವೆಂಬರ್ 17ರಂದು ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾದಾಗ ಆತನ ಈ ಹಗರಣಗಳೆಲ್ಲ ಬಯಲಾಗಿದ್ದವು.
2021 ಜನವರಿ 14ರಂದು ಆತನಿಂದ 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್‌ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಹೇಳಲಾಗಿತ್ತು. 2021 ಫೆಬ್ರವರಿ 22ರಂದು ವಿವಿಧ ಸೈಬರ್ ಕ್ರೈಂಗಳಲ್ಲಿ ಭಾಗಿಯಾದ ಆರೋಪದಡಿ ಶ್ರೀಕಿ ವಿರುದ್ಧ 757 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು.
2021 ಮಾರ್ಚ್ 3ರಂದು ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದು ತನಿಖೆ ಕೈಗೊಳ್ಳುವಂತೆ ಕೋರಿದ್ದರು.
2021 ಏಪ್ರಿಲ್ 28ರಂದು ಹ್ಯಾಕರ್ ಶ್ರೀಕಿ ಜಾಲ ವಿದೇಶದಲ್ಲಿ ಹರಡಿರುವುದರಿಂದ ಇಂಟರ್‌ಪೋಲ್ ಮೂಲಕ ತನಿಖೆ ನಡೆಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಇಂಟರ್‌ಪೋಲ್ ವಿಭಾಗಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.
2021 ಅಕ್ಟೋಬರ್ 27ರಂದು ಸಿದ್ದರಾಮಯ್ಯ ಅವರ ಟ್ವೀಟ್ ಬಳಿಕ ಬಿಟ್ ಕಾಯಿನ್ ಪ್ರಕರಣಕ್ಕೆ ರಾಜಕೀಯ ರೂಪ ಸಿಕ್ಕಿತು. ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳಿದ್ದಾರೆ ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ತನಿಖಾಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ವರದಿ ಕಳವಳಕಾರಿ ಎಂದು ಅವರು ಟ್ವೀಟ್ ಮಾಡಿದ್ದರು.
ಇದಾದ ಬಳಿಕ ಕಾಂಗ್ರೆಸ್ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳು ಸತತವಾಗಿ ನಡೆದವು. ಕಾಂಗ್ರೆಸ್ ನಾಯಕರ ಹೆಸರುಗಳೂ ಇವೆ ಎಂದು ಒಂದು ಹಂತದಲ್ಲಿ ಬೊಮ್ಮಾಯಿ ಹೇಳಿದ್ದೂ, ಆಗ ಹೆಸರು ಬಹಿರಂಗಪಡಿಸಲಿ ಎಂದು ಕಾಂಗ್ರೆಸ್ ಸವಾಲು ಹಾಕಿದ್ದೂ ಆಯಿತು.
2021 ನವೆಂಬರ್ 10ರಂದು ಜಾಮೀನಿನ ಮೇಲೆ ಶ್ರೀಕಿ ಬಿಡುಗಡೆಯಾಗಿ, ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದ. ಇದೆಲ್ಲದರ ನಡುವೆ, ಪ್ರಕರಣ ನ್ಯಾಯಾಲಯದ ವ್ಯಾಪ್ತಿಯಲ್ಲಿರುವಾಗಲೇ ಪೊಲೀಸರ ತನಿಖೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಅಡ್ವೊಕೇಟ್ ಜನರಲ್ ಎ ಎಸ್ ಪೊನ್ನಣ್ಣ ಹಲವು ಪ್ರಶ್ನೆಗಳನ್ನು ಬೊಮ್ಮಾಯಿ ಸರ್ಕಾರಕ್ಕೆ ಹಾಕಿದ್ದರು.
ಆರೋಪಿ ಕಸ್ಟಡಿಯಲ್ಲಿದ್ದಾಗ ಡ್ರಗ್ಸ್ ಹೇಗೆ ಪಡೆದುಕೊಂಡ ? ಆರೋಪಿಯನ್ನು ಮಂಪರಿನಲ್ಲಿ ಇಟ್ಟಿದ್ದೇಕೆ ? ಎಂಬುದೂ ಆ ಪ್ರಶ್ನೆಗಳಲ್ಲಿ ಸೇರಿದ್ದವು. ಆರೋಪ ಪಟ್ಟಿ ಅಪರಿಪೂರ್ಣ ತನಿಖೆಯ ಅಂಶಗಳಿಂದ ತುಂಬಿದೆ ಎಂದೂ ಆರೋಪಿಸಲಾಗಿತ್ತು.
ರಾಜ್ಯದಲ್ಲಿ 77 ಪ್ರಕರಣಗಳು: ಕ್ರಿಪ್ಟೊ’ ಕರೆನ್ಸಿಯ ಪ್ರಕಾರಗಳಲ್ಲಿ ಒಂದಾದ ಬಿಟ್ ಕಾಯಿನ್ ಹೂಡಿಕೆ ನೆಪದಲ್ಲಿ ಜನರನ್ನು ವಂಚಿಸಿರುವ ಬಗ್ಗೆ ರಾಜ್ಯದಾದ್ಯಂತ 77 ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತಿದೆ. ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದ ಆರ್‌ಟಿಐ ಕಾರ್ಯಕರ್ತ ಎ.ಆರ್. ಅಶೋಕ್ ಕುಮಾರ್ ಅಡಿಗ ಅವರನ್ನು ಸಿಸಿಬಿ ಪೊಲೀಸರು, ಕ್ಲಬ್‌ಗಳಿಂದ ಹಣ ವಸೂಲಿ ಮಾಡಿದ್ದ ಪ್ರಕರಣದಲ್ಲಿ ಬಂಧಿಸಿದ್ದರು.
ಈಗ ಈ ಪ್ರಕರಣದ ಮರು ತನಿಖೆಯಾಗಲಿದೆ ಎನ್ನುವುದು ಮತ್ತೆ ಹಲವರ ನಡುಕಕ್ಕೆ ಕಾರಣವಾಗಿದ್ದರೂ ಅಚ್ಚರಿಪಡಬೇಕಿಲ್ಲ.