ಸಹಕಾರ ಸಂಘಗಳಲ್ಲಿ 1 ಲಕ್ಷ ರೂ.ವರೆಗಿನ ಸಾಲ ಮನ್ನಾ ಯೋಜನೆಗೆ ಸರಕಾರದಿಂದ 232 ಕೋಟಿ ರೂ. ಬಾಕಿ

Update: 2024-02-15 03:37 GMT
Editor : Naufal | Byline : ಜಿ.ಮಹಾಂತೇಶ್

ಬೆಂಗಳೂರು, .14: ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 1 ಲಕ್ಷ ರೂ. ವರೆಗಿ ನ ಸಾಲವನ್ನು ಮನ್ನಾ ಮಾಡಲು ಜಾರಿಯಲ್ಲಿರುವ ಯೋಜನೆಯಡಿಯಲ್ಲಿ ಇನ್ನೂ 232 ಕೋಟಿ ರೂ.ಗಳನ್ನು ಸರಕಾರವು ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಕ್ಕೆ ವಿಧಿಸಿದ್ದ ಶೇಕಡ 3ರ ಬಡ್ಡಿ ದರವನ್ನು ಶೂನ್ಯಕ್ಕೆ ಇಳಿಸಲು ಸಲಹೆ ನೀಡಿರುವ ಸಹಕಾರ ಇಲಾಖೆಯು ಇದನ್ನು ಜಾರಿಗೊಳಿಸಿದರೆ ಪ್ರತೀ ವರ್ಷ 117 ಕೋಟಿ ರೂ. ಸರಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗಲಿದೆ ಎಂಬ ಲೆಕ್ಕಾಚಾರವನ್ನು ಮುಂದಿಟ್ಟಿರುವ ಬೆನ್ನಲ್ಲೇ 1 ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡುವ ಯೋಜನೆಗೆ 232 ಕೋಟಿ ರೂ. ಬಾಕಿ ಇರುವುದು ಮುನ್ನೆಲೆಗೆ ಬಂದಿದೆ.

ಈ ಕುರಿತು ಸಹಕಾರ ಇಲಾಖೆಯು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೇರವಾಗಿ ಪತ್ರ ಬರೆಯುತ್ತಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಜೀವಣಗಿ ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಕರಣದಲ್ಲಿ ಸಹಕಾರ ಸಂಘಗಳ ನಿಬಂಧಕರಿಗೆ 2024ರ ಫೆ.6ರಂದು ಪತ್ರವನ್ನು ಬರೆದಿದೆ. 1 ಲಕ್ಷ ರೂ.ವರೆಗಿನ ಸಾಲ ಮನ್ನಾ ಯೋಜನೆ ಮಾಡುವ ಸಂಬಂಧ 232 ಕೋಟಿ ರೂ. ಬಾಕಿ ಇದೆ ಎಂಬ ಸಂಗತಿಯನ್ನು ಇದೇ ಪತ್ರದಲ್ಲಿ ಸಹಕಾರ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಉಲ್ಲೇಖಿಸಿದ್ದಾರೆ. ಈ ಪತ್ರದ ಪ್ರತಿಯು 'the-file.in'ಗೆ ಲಭ್ಯವಾಗಿದೆ.

'1 ಲಕ್ಷ ರೂ. ವರೆಗಿನ ಸಾಲ ಮನ್ನಾ ಯೋಜನೆಯಡಿ ಬಾಕಿ ಇರುವ ಅಂದಾಜು 232 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಬೇಕು ಎಂದು ಕೋರಿ ಈಗಾಗಲೇ ಕಡತವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ. ಕಡತವು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿರುತ್ತದೆ. ಈ ಕಡತವು ಆರ್ಥಿಕ ಇಲಾಖೆಯಿಂದ ಹಿಂದಿರುಗಿದ ನಂತರ ಆ ಕಡತದಲ್ಲಿನ ನಿರ್ದೇಶನದ ಅನುಸಾರ ರೈತರ ಬಾಕಿ ಸಾಲಮನ್ನಾದ ಮೊತ್ತವನ್ನು ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುವುದು' ಎಂದು ಸಹಕಾರ ಸಂಘಗಳ ನಿಬಂಧಕರಿಗೆ ಸೂಚಿಸಿರುವುದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಜಿ.ಮಹಾಂತೇಶ್

contributor

Similar News